ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಶಿಕ್ಷಕ 32 ವರ್ಷದ ಶಿಕ್ಷಕ ರಂಜಿತ್ ಸಿನ್ಹ ದಿಸಾಳೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್(ಸುಮಾರು 7.37 ಕೋಟಿ ರೂ.) ಬಹುಮಾನದೊಂದಿಗೆ ಪ್ರತಿಷ್ಠಿತ ಗ್ಲೋಬಲ್ ಟೀಚರ್ ಪ್ರೈಜ್ ಗೆ ಪಾತ್ರರಾಗಿದ್ದಾರೆ.
ಬಾಲಕಿಯರ ಶಿಕ್ಷಣ ಉತ್ತೇಜಿಸಲು ಮತ್ತು ಭಾರತದಲ್ಲಿ ಕ್ಯೂಆರ್ ಕೋಡ್ ಪಠ್ಯಪುಸ್ತಕ ಕ್ರಾಂತಿ ಮಾಡಿದ ಅವರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ಅವರು ಮರು ವಿನ್ಯಾಸ ಮಾಡಿದ್ದಾರೆ.
ವಿಶ್ವದಾದ್ಯಂತ 10 ಮಂದಿ ಫೈನಲಿಸ್ಟ್ ಗಳಲ್ಲಿ ರಂಜಿತ್ ಸಿನ್ಹ ವಿಜೇತರಾಗಿದ್ದಾರೆ. ಶಿಕ್ಷಕರು ನಿಜವಾದ ಬದಲಾವಣೆ ಮಾಡುವವರು ಎಂದು ಹೇಳುವ ಅವರು, ತಮ್ಮ ಬಹುಮಾನದ ಹಣದಲ್ಲಿ ಶೇಕಡ 50 ರಷ್ಟನ್ನು ಫೈನಲಿಸ್ಟ್ ಸಹವರ್ತಿಗಳೊಂದಿಗೆ ಹಂಚಿಕೊಳ್ಳುವುದಾಗಿ ಘೋಷಿಸಿದ್ದಾರೆ.
ವರ್ಕಿ ಫೌಂಡೇಷನ್ ಪ್ರಶಸ್ತಿ ನೀಡಿದ್ದು, ಲಂಡನ್ ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನಲ್ಲಿ ವರ್ಚುವಲ್ ಆಗಿ ಪ್ರಶಸ್ತಿ ಘೋಷಣೆಯಾಗಿದೆ. ರಂಜಿತ್ ಸಿನ್ಹ ದಿಸಾಳೆ ಅವರ ಸಾಧನೆಯನ್ನು ಗುರುತಿಸಿ ಬಹುಮಾನ ಸಹಿತ ಪ್ರಶಸ್ತಿ ನೀಡಲಾಗಿದೆ. ಅವರ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.