ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ದೇಶದಲ್ಲಿ ಒಂದೊಂದೇ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಮಹಾರಾಷ್ಟ್ರದಲ್ಲೂ ಇದೀಗ ನಾಗರಿಕ ಸಮಾಜ ತಲೆತಗ್ಗಿಸುವಂತಹ ಪ್ರಕರಣವೊಂದು ಮುನ್ನಲೆಗೆ ಬಂದಿದೆ.
17 ವರ್ಷದ ಅಪ್ರಾಪ್ತೆ ಹಾಡ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ದೂರಿನಲ್ಲಿ ಈಕೆ ನನ್ನ ತಂದೆ ಕಳೆದ ಕೆಲ ವರ್ಷಗಳಿಂದ ನನ್ನನ್ನು ಬೇರೆ ಬೇರೆ ಪುರುಷರಿಗೆ ಮಾರಾಟ ಮಾಡಿದ್ದಾನೆ. ನನ್ನ ತಂದೆಯಿಂದ ನನ್ನನ್ನು ಖರೀದಿ ಮಾಡಿದ ಕಾಮುಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ.
ಅಪ್ರಾಪ್ತೆ ದಾಖಲಿಸಿದ ದೂರಿನ ಪ್ರಕಾರ ಪೊಲೀಸರು 8 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಪ್ರಾಪ್ತೆಯ ತಂದೆ, ಮಲತಾಯಿ, ಈಕೆಯನ್ನು ಖರೀದಿ ಮಾಡಿದ ಮೂವರು ಪುರುಷರು ಹಾಗೂ ವೇಶ್ಯಾವಾಟಿಕೆ ನಡೆಸುವ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೇಸ್ ಸಂಬಂಧ ಮಾತನಾಡಿದ ಹೆಚ್ಚುವರಿ ಸೂಪರಿಟೆಂಡೆಂಟ್ ವಿಜಯ್ ಕಬಾಡೆ, ಈ ಬಾಲಕಿಯನ್ನು ಕೆಲ ದಿನಗಳ ಹಿಂದಷ್ಟೇ ಆಕೆಯ ಚಿಕ್ಕಮ್ಮ ಹಾಗೂ ಮತ್ತೊಮ್ಮ ಸಂಬಂಧಿ ಸೇರಿ ರಕ್ಷಿಸಿದ್ದಾರೆ. ಫೋನ್ ಮೂಲಕ ಸಂತ್ರಸ್ತೆ ತನ್ನ ತಾಯಿಯ ತಂಗಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ ಈಕೆಯ ತಂದೆ ಹಣದಾಸೆಗಾಗಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಕೂಲಿ ಕಾರ್ಮಿಕನಾಗಿರುವ ಈಕೆಯ ತಂದೆ ವೇಶ್ಯಾವಾಟಿಕೆ ನಡೆಸುವ ಮಹಿಳೆಯ ಸಹಾಯದಿಂದ ಮೊದಲ ಬಾರಿಗೆ ಸಂತ್ರಸ್ತೆಯನ್ನು ರಾಜಸ್ಥಾನದ ಕೋಟಾದ ನಿವಾಸಿಗೆ ಮಾರಾಟ ಮಾಡಿದ್ದ. ಸಂತ್ರಸ್ತೆಗೆ ಅಮಲು ಪದಾರ್ಥ ನೀಡಿ ಪದೇ ಪದೇ ಅತ್ಯಾಚಾರ ಎಸಗಲಾಗಿದೆ. ಈಕೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಪುನಃ ಮನೆಗೆ ವಾಪಸ್ ತಂದು ಬಿಡಲಾಗಿತ್ತು.
ನಂದುರ್ಬಾರ್ ನಿವಾಸಿಯಾಗಿದ್ದ 45 ವರ್ಷದ ವ್ಯಕ್ತಿಯು ತನ್ನನ್ನು 2 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾಳೆ. ಕಳೆದ 8 ತಿಂಗಳಲ್ಲಿ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆದಿದೆ. ಆತ ಕಂತಿನಲ್ಲಿ ಹಣ ಪಾವತಿ ಮಾಡುತ್ತಿದ್ದ. ಕೊನೆಯ ಕಂತು ಪಾವತಿ ಮಾಡದ್ದಕ್ಕೆ ನನ್ನ ತಂದೆ ನನ್ನನ್ನು ವಾಪಸ್ ಮನೆಗೆ ಕರೆತಂದರು. ಇದಾಗಿ ಕೆಲವೇ ದಿನಗಳಲ್ಲಿ ನನ್ನ ಸತಾರಾದ ವ್ಯಕ್ತಿಗೆ ಮಾರಾಟ ಮಾಡಲಾಗಿತ್ತು. ಇಲ್ಲಿ ಕೂಡ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆದಿದೆ. ನಾನು ಈ ಸಮಯದಲ್ಲಿ ನನ್ನ ಚಿಕ್ಕಮ್ಮನ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.