ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿಯೊಬ್ಬ ಸೋಡಿಯಂ ನೈಟ್ರೇಟ್ ಮಿಶ್ರಿತ ಪಾನೀಯ ಕುಡಿಸಿ ತನ್ನ 14 ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ.
ಆರೋಪಿಯನ್ನು 43 ವರ್ಷದ ವಿಜಯ್ ಬಟ್ಟು ಎಂದು ಗುರುತಿಸಲಾಗಿದೆ. ತನ್ನ ಮಗ ವಿಶಾಲ್ ಬಟ್ಟುಗೆ ಸಂಬಂಧಿಸಿದಂತೆ ಶಾಲೆಯಿಂದ ಬಂದ ದೂರುಗಳಿಂದ ಹತಾಶೆ, ಆಕ್ರೋಶದಿಂದ ಕೃತ್ಯವೆಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ವಿಶಾಲ್ ಅತಿಯಾಗಿ ಮೊಬೈಲ್ ನೋಡುತ್ತಿದ್ದ. ಸರಿಯಾಗಿ ಓದುತ್ತಿರಲಿಲ್ಲ. ತನ್ನ ಸಹೋದರಿಯೊಂದಿಗೆ ಜಗಳವಾಡುತ್ತಿದ್ದ ಜೋಧಾವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ್ ಜಗತಾಪ್ ಹೇಳಿದ್ದಾರೆ.
ಜನವರಿ 13 ರಂದು ವಿಶಾಲ್ ಮನೆಗೆ ಬಾರದ ಹಿನ್ನೆಲೆಯಲ್ಲಿ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅದೇ ದಿನ ತುಳಜಾಪುರ ನಾಕಾ ಬಳಿಯ ರಸ್ತೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ, ನಂತರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಜಯ್ ಅವರ ನಡವಳಿಕೆ ಅನುಮಾನಾಸ್ಪದವಾಗಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಗ ಮಗನಿಗೆ ಸೋಡಿಯಂ ನೈಟ್ರೇಟ್ ಬೆರೆಸಿದ ತಂಪು ಪಾನೀಯವನ್ನು ನೀಡಿದ್ದಾಗಿ ಹೇಳಿದ್ದು, ನಂತರ ಶವವನ್ನು ತುಳಜಾಪುರ ನಾಕಾ ಬಳಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ವಿಜಯ್ ಬಟ್ಟು ಅವರನ್ನು ಜನವರಿ 29 ರಂದು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.