ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಎನ್ ಸಿ ಪಿ ಸಚಿವರ ಬೆಂಗಾವಲು ಪಡೆಯನ್ನು ಸ್ವಾಗತಿಸಲು ಉತ್ತರ ಮಹಾರಾಷ್ಟ್ರದ ರಸ್ತೆಯಲ್ಲಿ ಶಾಲಾ ಮಕ್ಕಳು ಸಾಲಾಗಿ ನಿಂತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜಲ್ಗಾಂವ್ ಜಿಲ್ಲೆಯ ಅಮಲ್ನೇರ್ ತೆಹಸಿಲ್‌ನ ಆಶ್ರಮ ಶಾಲೆಯಿಂದ ಮಕ್ಕಳು ರಸ್ತೆಯ ಮೇಲೆ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಹುಡುಗಿಯರು ಒಂದು ಕಡೆ ಮತ್ತು ಹುಡುಗರು ಇನ್ನೊಂದು ಬದಿಯಲ್ಲಿ ನಿಂತಿದ್ದಾರೆ.
ತಮ್ಮ ಪಕ್ಷದ ಇತರ ಎಂಟು ಶಾಸಕರೊಂದಿಗೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅನಿಲ್ ಪಾಟೀಲ್ ಆಗಮನಕ್ಕಾಗಿ ಮಕ್ಕಳು, ಕೆಲವರು ಪಾದರಕ್ಷೆಗಳಿಲ್ಲದೆ ರಸ್ತೆಯುದ್ದಕ್ಕೂ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಸಚಿವರ ವಾಹನ ಬಂದ ತಕ್ಷಣ ಮಕ್ಕಳು ಎದ್ದು ನಿಂತಿದ್ದು, ಕೆಲವರು ಸಚಿವರಿಗೆ ನಮಸ್ಕರಿಸುತ್ತಿರುವುದು ಕಂಡುಬಂತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದರೂ, ಸಚಿವರು ಅಥವಾ ಸ್ಥಳೀಯ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಮುಂಬೈನಿಂದ 350 ಕಿಮೀ ದೂರದಲ್ಲಿರುವ ಅಮಲ್ನೇರ್‌ನ ಪೊಲೀಸ್ ಅಧಿಕಾರಿಯೊಬ್ಬರು, ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.