ಮುಂಬೈ: ಬಂಡಾಯ ನಾಯಕರು ವಾಪಸಾಗದಿದ್ದರೆ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ ಕೆಲವೇ ಗಂಟೆಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಇಬ್ಬರು ಶಾಸಕರಾದ ಮಂಗೇಶ್ ಕುಡಾಲ್ಕರ್ ಮತ್ತು ದಿಲೀಪ್ ಲಾಂಡೆ ಅವರ ಕಚೇರಿಗಳನ್ನು ಗುರಿಯಾಗಿಸಿ ಶಿವಸೈನಿಕರು ದಾಳಿ ನಡೆಸಿದ್ದಾರೆ.
ಶಿವಸೇನೆಯ ಯುವ ಘಟಕವಾದ ಯುವಸೇನೆ ಇಂದು ಕುರ್ಲಾದಲ್ಲಿರುವ ಕುಡಾಲ್ಕರ್ ಅವರ ಕಚೇರಿ ಮತ್ತು ಚಾಂಡಿವಲಿಯಲ್ಲಿರುವ ಲಾಂಡೆ ಅವರ ಕಚೇರಿಯನ್ನು ಧ್ವಂಸಗೊಳಿಸಿದೆ. ಶಾಸಕರಿಬ್ಬರೂ ಪ್ರಸ್ತುತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಏಕನಾಥ್ ಶಿಂಧೆ ಅವರೊಂದಿಗೆ ಇದ್ದಾರೆ. ಕಚೇರಿ ಮೇಲೆ ದಾಳಿ ಮಾಡಿದ ಶಿವಸೈನಿಕರು ಪೋಸ್ಟರ್ ಗಳನ್ನು ಹರಿದು ಬಂಡಾಯ ನಾಯಕರ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ಮಹಾರಾಷ್ಟ್ರದ ಎಲ್ಲಾ ಪೊಲೀಸ್ ಠಾಣೆಗಳು, ವಿಶೇಷವಾಗಿ ಮುಂಬೈನಲ್ಲಿರುವ ಪೊಲೀಸ್ ಠಾಣೆಗಳಿಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡಲಾಗಿದೆ. ಶಿವಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿಯಬಹುದು ಎಂಬ ಮಾಹಿತಿ ಸಿಕ್ಕಿದೆ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಂವಿಎ ಸರ್ಕಾರದಲ್ಲಿ ಹಾಲಿ ಸಚಿವರಾಗಿರುವ ಏಕನಾಥ್ ಶಿಂಧೆ ಅವರು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರುತ್ತಿದ್ದಾರೆ. ತನಗೆ ಪಕ್ಷೇತರರು, ಶಿವಸೇನೆ ಸೇರಿ 50 ಶಾಸಕರ ಬೆಂಬಲವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಂವಿಎ ಮೈತ್ರಿ ತೊರೆದು ಬಿಜೆಪಿಯೊಂದಿಗೆ ಸರ್ಕಾರ ರಚಿಸುವಂತೆ ಬಂಡಾಯ ಶಾಸಕರು ಮುಖ್ಯಮಂತ್ರಿಗೆ ಒತ್ತಡ ಹೇರುತ್ತಿದ್ದಾರೆ.
ಬಂಡಾಯ ನಾಯಕರು ಗುವಾಹಟಿಯಿಂದ ಮುಂಬೈಗೆ ಹಿಂತಿರುಗಿದರೆ ಮೈತ್ರಿಯಿಂದ ಹೊರಬರುವ ಬಗ್ಗೆ ಯೋಚಿಸಬಹುದು ಎಂದು ಶಿವಸೇನೆ ಹೇಳಿದೆ.