ಮುಂಬೈ: ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಮೇ ತಿಂಗಳಲ್ಲಿ 8000ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಕೊರೋನಾ ಮೂರನೇ ಅಲೆ ಪರಿಣಾಮ ಕಡಿಮೆ ಮಾಡಲು ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ ಕ್ರಮ ಕೈಗೊಳ್ಳತೊಡಗಿದೆ.
ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ವಿಶೇಷವಾಗಿ ಮಕ್ಕಳಿಗೆ ಕೋವಿಡ್-19 ವಾರ್ಡ್ ನಿರ್ಮಿಸಲಾಗುತ್ತಿದೆ. ಇಲ್ಲಿ ಪ್ರಸ್ತುತ ಐವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ರೋಗಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾರ್ಪೋರೇಟರ್ ಅಭಿಜಿತ್ ಭೋಸಲೆ ಅವರು, ನಾವು ಮಕ್ಕಳಿಗಾಗಿ ಕೋವಿಡ್ ವಾರ್ಡ್ ಸಿದ್ಧಪಡಿಸುತ್ತಿದ್ದೇವೆ. ಮೂರನೇ ಅಲೆ ಬಂದಾಗ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಹಲವು ಮಕ್ಕಳು ಆಸ್ಪತ್ರೆಯಲ್ಲಿದ್ದಾರೆ. ಮಕ್ಕಳು ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ಬಂದಾಗ ಅವರು ಆಸ್ಪತ್ರೆಯ ಬದಲು ಶಾಲೆ ಅಥವಾ ನರ್ಸರಿಯಲ್ಲಿದ್ದಾರೆ ಎಂಬ ಭಾವನೆ ಬರುವಂತೆ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ತಿಂಗಳು ಅಹ್ಮದ್ ನಗರದಲ್ಲಿ ಕನಿಷ್ಠ 8 ಸಾವಿರ ಮಕ್ಕಳು ಮತ್ತು ಹದಿಹರೆಯದವರಿಗೆ ಸೋಂಕು ತಗುಲಿದೆ. ಅಹಮದ್ ನಗರದಲ್ಲಿ ಸುಮಾರು 10 ಪ್ರತಿಶತದಷ್ಟು ಪ್ರಕರಣ ದಾಖಲಾಗಿದೆ. ಮೂರನೇ ಅಲೆಯ ಎದುರಿಸಲು ಜಿಲ್ಲಾಡಳಿತ ಮಕ್ಕಳ ವೈದ್ಯರನ್ನು ತಂಡವನ್ನು ರಚಿಸಿದೆ.
ಮೇ ತಿಂಗಳಲ್ಲಿ 8000 ಮಕ್ಕಳಿಗೆ ಪಾಸಿಟಿವ್ ಬಂದಿರುವುದು ಆತಂಕಕಾರಿಯಾಗಿದೆ ಎಂದು ಅಹಮದ್ ನಗರ ಜಿಲ್ಲಾ ಮುಖ್ಯಸ್ಥ ರಾಜೇಂದ್ರ ಭೋಸಲೆ ಹೇಳಿದ್ದಾರೆ.
ಎರಡನೇ ಅಲೆಯಲ್ಲಿ ಹಾಸಿಗೆ ಮತ್ತು ಆಮ್ಲಜನಕ ಕೊರತೆ ಇತ್ತು. ಹಾಗಾಗಿ ಮೂರನೇ ಅಲೆಯಲ್ಲಿ ಅದನ್ನು ನಾವು ತಪ್ಪಿಸಲು ಮೂಲಸೌಕರ್ಯ ಒದಗಿಸಬೇಕು. ಜೊತೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಾಸಕ ಸಂಗ್ರಾಮ್ ಜಗತಾಪ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಮೂರನೇ ಅಲೆ ಎದುರಾಗಬಹುದೆಂಬ ನಿರೀಕ್ಷೆಯಿದೆ. ಸಿದ್ಧತೆಗಾಗಿ 2 ತಿಂಗಳ ಸಮಯಾವಕಾಶ ಇದೆ.
ಫೆಬ್ರವರಿಯಲ್ಲಿ ದೇಶದಲ್ಲಿ ಕೊರೋನಾ ಎರಡನೇ ಅಲೆಯಿಂದ ತತ್ತರಿಸಿದ ಮೊದಲ ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದಾಗಿತ್ತು. ರೋಗಿಗಳ ಸಂಖ್ಯೆ ವಿಪರೀತ ಏರಿಕೆಯಾಗಿ ಚಿಕಿತ್ಸೆ, ಆಕ್ಸಿಜನ್, ಔಷಧ ಕೊರತೆ ನಿವಾರಿಸಲು ಹೆಣಗಾಡಿತು. ಮೂರನೇ ಅಲೆ ಅನಿವಾರ್ಯ ಎಂದು ಕೇಂದ್ರ ಸರ್ಕಾರದ ಉನ್ನತ ವೈಜ್ಞಾನಿಕ ಸಲಹೆಗಾರ ಡಾ.ಕೆ. ವಿಜಯರಾಘವನ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು. ಮೂರನೇ ಅಲೆ ಎಚ್ಚರಿಕೆ ಆಧರಿಸಿ ಮಹಾರಾಷ್ಟ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.