ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ‘ಪಕ್ಷ ವಿರೋಧಿ’ ಚಟುವಟಿಕೆಗಾಗಿ 28 ಬಂಡಾಯ ಅಭ್ಯರ್ಥಿಗಳನ್ನು ಮಹಾರಾಷ್ಟ್ರ ಕಾಂಗ್ರೆಸ್ ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ.
22 ವಿಧಾನಸಭಾ ಕ್ಷೇತ್ರಗಳಿಂದ ಅಮಾನತುಗೊಂಡಿರುವ ನಾಯಕರು ನವೆಂಬರ್ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದಾರೆ.
ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಎಂವಿಎ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಯಾವುದೇ ಬಂಡುಕೋರರು ಆರು ವರ್ಷಗಳ ಅಮಾನತು ಎದುರಿಸಬೇಕಾಗುತ್ತದೆ ಎಂದು ಚೆನ್ನಿತಾಲ ಈ ಹಿಂದೆ ಎಚ್ಚರಿಕೆ ನೀಡಿದ್ದರು.
ಯಾರೆಲ್ಲ ಅಮಾನತು?
ರಾಮ್‌ಟೆಕ್ ಕ್ಷೇತ್ರದಿಂದ ಮಾಜಿ ಸಚಿವ ರಾಜೇಂದ್ರ ಮುಲಾಕ್, ಕಟೋಲ್‌ನಿಂದ ಯಜ್ಞವಾಲ್ಕ್ ಜಿಚ್ಕರ್, ಕಸ್ಬಾದಿಂದ ಕಮಲ್ ವ್ಯಾವಾರೆ, ಕೊಪ್ರಿ ಪಚ್ಪಖಾಡಿಯಿಂದ ಮನೋಜ್ ಶಿಂಧೆ ಮತ್ತು ಪಾರ್ವತಿಯಿಂದ ಆಬಾ ಬಾಗುಲ್ ಸೇರಿದಂತೆ ಪ್ರಮುಖ ನಾಯಕರು ಅಮಾನತುಗೊಂಡಿದ್ದಾರೆ.
ಶಮಕಾಂತ್ ಸಾನೆರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಕಲ್ಯಾಣ್ ಬೋರಡೆ, ಚಂದ್ರಪಾಲ್ ಚೌಕ್ಸೆ, ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವ್, ಭಾರತ್ ಯೆರೆಮೆ, ಅಭಿಲಾಷ ಗವಟೂರೆ, ಪ್ರೇಮಸಾಗರ್ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಆಸ್ಮಾ ಜಾವದ್ ಚಿಖ್ಲೇಕರ್, ಹಂಸಕುಮಾರ್ ಪಾಂಡೆ, ಕಮಲ ವ್ಯಾವಹರೆ, ಮೋಹನರಾವ್ ದಾಂಡೇಕರ್, ಮಂಗಲ್ ವಿಲಾಸ್ ಭುಜ್ವಲ್, ಮನೋಜ್ ಶಿಂಧೆ, ಸುರೇಶ ಪಾಟೀಲಖೇಡೆ, ವಿಜಯ್ ಖಡ್ಸೆ, ಶಬೀರ್ ಖಾನ್, ಅವಿನಾಶ್ ಲಾಡ್, ಯಗ್ವಾಲ್ಯ ಜಿಚ್ಕರ್, ರಾಜು ಜೋಡೆ, ರಾಜೇಂದ್ರ ಮುಖಾ ಅವರನ್ನು ಅಮಾನತು ಮಾಡಲಾಗಿದೆ.
ಇದಕ್ಕೂ ಮುನ್ನ ಬಿಜೆಪಿ 37 ವಿಧಾನಸಭಾ ಕ್ಷೇತ್ರಗಳಲ್ಲಿ 40 ಮುಖಂಡರು ಮತ್ತು ಪದಾಧಿಕಾರಿಗಳನ್ನು ಉಚ್ಚಾಟಿಸಿತ್ತು.
ಮಹಾರಾಷ್ಟ್ರ ಚುನಾವಣೆ
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಮತಗಳ ಎಣಿಕೆ ಮಾಡಲಾಗುತ್ತದೆ. ಕಾಂಗ್ರೆಸ್, ಶಿವಸೇನೆ(UBT), ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(SCP) ಒಳಗೊಂಡಿರುವ ವಿರೋಧ ಪಕ್ಷದ MVA ಒಕ್ಕೂಟ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡಿರುವ ಮಹಾಯುತಿ ಮೈತ್ರಿಕೂಟದ ನಡುವೆ ಪೈಪೋಟಿ ಇದೆ.
2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44. 2014ರಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು.