ಎನ್ ಸಿ ಪಿಯ ಅಜಿತ್ ಪವಾರ್ ಬಿಜೆಪಿ ಮೈತ್ರಿಕೂಟ ಬೆಂಬಲಿಸಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಯಾಗಿದೆ. ಅಜಿತ್ ಪವಾರ್ ಕೊಟ್ಟ ಮಾಸ್ಟರ್ ಸ್ಟ್ರೋಕ್ ಎನ್ ಸಿ ಪಿಗಷ್ಟೇ ಅಲ್ಲದೇ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದ ವಿಪಕ್ಷಗಳಿಗೂ ಶಾಕ್ ನೀಡಿದೆ.
ಈಗಾಗ್ಲೇ ಬಿಹಾರದ ಪಾಟ್ನಾದಲ್ಲಿ ಮೊದಲ ಹಂತದ ಸಭೆ ನಡೆಸಿದ್ದ ವಿಪಕ್ಷಗಳು ಎರಡನೇ ಸುತ್ತಿನ ಸಭೆಯನ್ನು ಬೆಂಗಳೂರಲ್ಲಿ ನಡೆಸಲು ನಿರ್ಧರಿಸಿದ್ದವು. ಆದರೆ ಜುಲೈ 13-14 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರತಿಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಜುಲೈ 20 ರಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನದ ನಂತರ ಈಗ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಎನ್ ಸಿ ಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಕೈಬಿಟ್ಟು ವಿಪಕ್ಷ ನಾಯಕರಾಗಿದ್ದ ಅಜಿತ್ ಪವಾರ್ ಮಹಾರಾಷ್ಟ್ರದ ಸರ್ಕಾರದ ಜೊತೆ ಕೈಜೋಡಿಸಿದ ನಂತರ ಈ ಬೆಳವಣಿಗೆಯಾಗಿದೆ.