ಮಹಾರಾಷ್ಟ್ರ ಪೊಲೀಸರು ತಮ್ಮ ಮಹಿಳಾ ಪೇದೆಗಳ ಕೆಲಸದ ಅವಧಿಯನ್ನು 12 ಗಂಟೆಗಳಿಂದ 8 ಗಂಟೆಗೆ ಇಳಿಸಿದ್ದಾರೆ. ಮಹಿಳಾ ಸಿಬ್ಬಂದಿಯ ವೃತ್ತಿಪರ ಹಾಗೂ ವೈಯಕ್ತಿಕ ಜೀವನ ಸಮತೋಲನದಲ್ಲಿರಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಳಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ ಈ ವಿಚಾರವಾಗಿ ಮಾತನಾಡಿದ್ದು ಪ್ರಾರಂಭಿಕ ಹಂತವಾಗಿ ಈ ಯೋಜನೆಯು ನಾಗ್ಪುರ, ಅಮರಾವತಿ ನಗರ ಹಾಗೂ ಪುಣೆ ಗ್ರಾಮಾಂತರದಲ್ಲಿ ಅನುಷ್ಠಾನಗೊಂಡಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳಿನಿಂದ ಈ ಉಪಕ್ರಮವು ಮೂರು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಕೆಲವೇ ದಿನಗಳಲ್ಲಿ ಇದು ರಾಜ್ಯದ ಇತರೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ ಎಂದು ಸಂಜಯ್ ಪಾಂಡೆ ಹೇಳಿದರು.
ಕುಟುಂಬ ನಿರ್ವಹಣೆ ಹಾಗೂ ವೃತ್ತಿ ಪರ ಜೀವನಗಳಲ್ಲಿ ಮಹಿಳಾ ಪೇದೆಗಳಿಗೆ ಇರುವ ಬದ್ಧತೆಗಳನ್ನು ಗಮನದಲ್ಲಿರಿಸಿಕೊಂಡು ಈ ಉಪಕ್ರಮವನ್ನು ಕಳೆದ ತಿಂಗಳಿನಿಂದ ಆರಂಭಿಸಲಾಗಿದೆ. ಹಾಗೂ ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದೇವೆ ಎಂದು ಪಾಂಡೆ ಹೇಳಿದ್ದಾರೆ.