ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಗುರುವಾರ ರಾತ್ರಿ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸ್ಥಳೀಯ ಪೊಲೀಸರ ಹೇಳಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥನೆಂದು ಗೊತ್ತಾಗಿದೆ ಎಂದು ಘಟನೆ ಕುರಿತು ಮಾತನಾಡಿದ ಯವತ್ಮಾ ಪೊಲೀಸ್ ವರಿಷ್ಠಾಧಿಕಾರಿ, ಆರೋಪಿ ಸೂರಜ್ ಠಾಕೂರ್ ಯವತ್ಮಾಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾನೆ. ವೈದ್ಯರು ಚಿಕಿತ್ಸೆ ನೀಡಲು ಬಂದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ ರೋಗಿಯನ್ನು ಪರೀಕ್ಷಿಸಲು ಹೋದ ವೈದ್ಯರಿಗೆ ಆತ ಅವಕಾಶ ಕೊಟ್ಟಿಲ್ಲ. ಅವರು ಸ್ವಲ್ಪ ಸಮಯದ ನಂತರ ರೋಗಿಯನ್ನು ಪರೀಕ್ಷಿಸಲು ಹಿಂತಿರುಗಿದ್ದ ವೇಳೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ವೈದ್ಯರ ದವಡೆಗೆ ಗಾಯವಾಗಿದೆ. ದಾಳಿಯಿಂದ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಯತ್ನಿಸಿದ ಮತ್ತೊಬ್ಬ ವೈದ್ಯನ ಬೆರಳಿಗೆ ಗಾಯಗಳಾಗಿವೆ.
ಇಬ್ಬರೂ ವೈದ್ಯರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಏತನ್ಮಧ್ಯೆ, ವೈದ್ಯರು ಚಾಕು ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದರು.