ಔರಂಗಾಬಾದ್: ಕೊರೋನಾ ಲಸಿಕೆ ಪಡೆಯದವರಿಗೆ ಪಡಿತರ, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ನೀಡದಿರಲು ಔರಂಗಾಬಾದ್ ಜಿಲ್ಲಾಡಳಿತ ನಿರ್ಧರಿಸಿದೆ.
ಅಡುಗೆ ಅನಿಲ ಸಿಲಿಂಡರ್, ಪಡಿತರ ಹಾಗೂ ಪೆಟ್ರೋಲ್ ಪಡೆಯಲು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿರಬೇಕು ಎಂದು ಔರಂಗಾಬಾದ್ ಜಿಲ್ಲಾಡಳಿತದಿಂದ ಆದೇಶಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಲಸಿಕೆ ನೀಡಿಕೆಯಲ್ಲಿ ಔರಂಗಾಬಾದ್ ಜಿಲ್ಲೆ 26 ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆ ಕಾರ್ಯಾಚರಣೆ ಚುರುಕುಗೊಳಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಸುನಿಲ್ ಚವಾಣ್ ಅವರು ಗ್ರಾಹಕರ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ನ್ಯಾಯಬೆಲೆ ಅಂಗಡಿಗಳು, ಗ್ಯಾಸ್ ಏಜೆನ್ಸಿಗಳು ಮತ್ತು ಪೆಟ್ರೋಲ್ ಪಂಪ್ ಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದೇಶವನ್ನು ಪಾಲಿಸದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಆಡಳಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.
ಲಸಿಕೆ ಅಭಿಯಾನ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಹಿಂದೆ ಔರಂಗಾಬಾದ್ ಜಿಲ್ಲೆಯ ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳ ಪ್ರವೇಶಕ್ಕೆ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಕೆಲಸಕ್ಕೆ ತೆರಳುವವರು ಲಸಿಕೆ ಪಡೆಯಲು ಅನುಕೂಲವಾಗುವಂತೆ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಸಿಕೆ ಅಭಿಯಾನ ನಡೆಸಲು ಔರಂಗಬಾದ್ ಜಿಲ್ಲಾ ಪರಿಷತ್ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.