ಮುಂಬೈ: ಮಹಾರಾಷ್ಟ್ರದ ನಾಗ್ಪುರದಿಂದ 55 ಕಿಲೋಮೀಟರ್ ದೂರದಲ್ಲಿರುವ ಬಜಾರ್ ಗ್ರಾಮದ ಸೋಲಾರ್ ಸ್ಫೋಟಕ ಕಂಪನಿಯಲ್ಲಿ ಸ್ಫೋಟ ಸಂಭವಿಸಿದೆ. ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಂಭವ ಇದೆ.
ಕ್ಯಾಸ್ಟ್ ಬೂಸ್ಟರ್ ಪ್ಲಾಂಟ್ ನಲ್ಲಿ ಪ್ಯಾಕಿಂಗ್ ಪ್ರಕ್ರಿಯೆ ವೇಳೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ, ಕಟ್ಟಡದ ಒಂದು ಭಾಗವು ಕುಸಿದಿದೆ. ಸಾವು, ನೋವುಗಳ ನಿಖರವಾದ ಸಂಖ್ಯೆಯನ್ನು ಇನ್ನೂ ದೃಢಪಡಿಸಬೇಕಾಗಿದೆ. ಅಪಘಾತದ ಸ್ಥಳದಿಂದ ಗಾಯಗೊಂಡ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಜನರು ಸ್ಥಳದಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಒಂದು ಭಾಗ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಸ್ಫೋಟದ ಕಾರಣ ತಿಳಿದಿಲ್ಲವಾದರೂ, ಘಟನೆಯ ಸ್ಥಳದಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಸ್ಫೋಟದ ಶಬ್ದ ಕೇಳುತ್ತಿದೆ ಎಂದು ನಿವಾಸಿಗಳು ಹೇಳಿದ್ದಾರೆ.