ಮುಂಬೈ: ಗ್ರೂಪ್ ಡೆವಲಪ್‌ಮೆಂಟ್ ಆಫೀಸರ್ ಮೇಲೆ ಮೈಕ್ ಮತ್ತು ನೀರಿನ ಬಾಟಲಿ ಎಸೆದ ಮಹಾರಾಷ್ಟ್ರ ಶಾಸಕನಿಗೆ ಸ್ಥಳೀಯ ನ್ಯಾಯಾಲಯ ಮೂರು ತಿಂಗಳ ಸಜೆ ವಿಧಿಸಿದೆ. ವರುದ್- ಮೋರ್ಶಿ ಕ್ಷೇತ್ರದ ಶಾಸಕ ದೇವೇಂದ್ರ ಭುಯಾರ್ 2019ರಲ್ಲಿ ಈ ಕೃತ್ಯವೆಸಗಿದ್ದು, ಅಮರಾವತಿಯ ಸೆಷನ್ಸ್ ಕೋರ್ಟ್ ಈ ತೀರ್ಪು ನೀಡಿದೆ.
“ಒಬ್ಬ ನಾಯಕನಾಗಿ ಮತ್ತು ಜನ ಸಾಮಾನ್ಯರ ಪ್ರತಿನಿಧಿಯಾಗಿರುವುದರಿಂದ ಹೆಚ್ಚಿನ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕಾದ್ದು ಅವರ ಕರ್ತವ್ಯ. ನಾಯಕರ ವರ್ತನೆಗಳನ್ನು ಅವರ ಬೆಂಬಲಿಗರೂ ಅನುಕರಿಸುತ್ತಾರೆ. ಸಾರ್ವಜನಿಕ ಕೆಲಸದಲ್ಲಿ ನಿರತರಾದವನ ಮೇಲೆ ಯಾವುದೇ ಕಾರಣವಿಲ್ಲದೇ ಕ್ರಿಮಿನಲ್ ಬಲ ಪ್ರಯೋಗ ಮಾಡಲಾಗಿದೆ. ಇಂತಹ ಕೃತ್ಯಗಳಿಂದ ಪ್ರಾಮಾಣಿಕ ಸರ್ಕಾರಿ ನೌಕರರ ನೈತಿಕತೆಗೆ ಹೊಡೆತ ಬೀಳುತ್ತದೆ. ಅವರು ಅಭದ್ರತೆಯ ವಾತಾವರಣದಲ್ಲಿ ಕೆಲಸ ಮಾಡುವಂತಾಗುತ್ತದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
SHOCKING NEWS: ಮಹಿಳೆಯನ್ನು ಕೊಲೆಗೈದು ದೇಹವನ್ನು ತುಂಡರಿಸಿ ನಾಲೆಗೆ ಬಿಸಾಕಿದ ದುಷ್ಕರ್ಮಿಗಳು
ಸ್ವಾಭಿಮಾನಿ ಪಕ್ಷದ ದೇವೇಂದ್ರ ಭೂಯಾರ್ ಅಮರಾವತಿ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಕಾಲಘಟ್ಟದಲ್ಲಿ 2019ರ ಮೇ 28ರಂದು ಸಭೆಯೊಂದರಲ್ಲಿ ಗ್ರೂಪ್ ಡೆವಲಪ್‌ಮೆಂಟ್ ಆಫೀಸರ್ ಮೇಲೆ ಮೈಕ್ ಮತ್ತು ನೀರಿನ ಬಾಟಲಿ ಎಸೆದಿದ್ದರು.
ಸಭೆಯಲ್ಲಿ ಗೊಂದಲ ಏರ್ಪಟ್ಟ ಕಾರಣ ಅರ್ಧದಲ್ಲೇ ಸಭೆ ಮುಕ್ತಾಯಗೊಳಿಸಲಾಗಿತ್ತು. ಸಭೆ ಆಯೋಜಿಸಿದ್ದ ಅಧಿಕಾರಿ ಗಾಡ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಭುಯಾರ್‌ಗೆ ಶಿಕ್ಷೆ ವಿಧಿಸುವಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್‌ಎಸ್ ಅಡ್ಕರ್, “ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವ ಅಭ್ಯಾಸವನ್ನು ಆರೋಪಿಗೆ ರೂಢಿಯಾಗಿರುವಂತಿದೆ. ಇದೇ ರೀತಿಯ ಅಪರಾಧಕ್ಕಾಗಿ ಈ ನ್ಯಾಯಾಲಯವು ಈ ಹಿಂದೆ ಶಿಕ್ಷೆ ವಿಧಿಸಿತ್ತು. ಸಾರ್ವಜನಿಕ ಪ್ರತಿನಿಧಿಯಾಗಿ ಆರೋಪಿಯ ನಡವಳಿಕೆಯು ಯೋಗ್ಯವಾಗಿಲ್ಲ” ಎಂದು ಹೇಳಿದರು.
ಜೋಳ ಮಾರಾಟದ ವಿಚಾರವಾಗಿ 2013ರ ಫೆ.27ರಂದು ಸ್ಥಳೀಯ ಸರ್ಕಾರಿ ಅಧಿಕಾರಿಯ ಮೇಲೆ ಭುಯಾರ್ ಹಲ್ಲೆ ನಡೆಸಿದ್ದರು. ಅಂದೂ ಇದೇ ರೀತಿ ದೂರು ವರುದ್ ಠಾಣೆಯಲ್ಲಿ ದಾಖಲಾಗಿತ್ತು. ಅಲ್ಲೂ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲ್ಪಟ್ಟಿತ್ತು. ಬಳಿಕ 2021ರಲ್ಲಿ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಶಿಕ್ಷೆ ಅಮಾನತುಗೊಂಡಿದೆ.