ನವದೆಹಲಿ: ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಶಿವಸೇನೆ ಸದಸ್ಯ ಒತ್ತಾಯಿಸಿದ್ದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದ್ದು, ಕರ್ನಾಟಕದ ಯಾವುದೇ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಯಾವುದೇ ಭಾಗವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವುದಿಲ್ಲ. ಅಂತಹ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಈ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಅನೇಕ ಬಾರಿ ಮನವಿ ಸಲ್ಲಿಕೆಯಾಗಿವೆ. ಆದರೆ, ಕೇಂದ್ರ ಸರ್ಕಾರ ಅವುಗಳನ್ನು ಪರಿಗಣಿಸಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ಕ್ಯಾತೆ ತೆಗೆಯುತ್ತಿದ್ದ ಶಿವಸೇನೆಗೆ ಹಿನ್ನಡೆಯಾಗಿದೆ.