ಮಹಾರಾಷ್ಟ್ರದ ನೀರು ಸರಬರಾಜು ಹಾಗೂ ನೈರ್ಮಲ್ಯ ಖಾತೆ ಸಚಿವ ಗುಲಾಬ್ ರಾವ್ ರಘುನಾಥ್ ಪಾಟೀಲ್ ತಮ್ಮ ಜಲಗಾಂವ್ ಗ್ರಾಮಾಂತರ ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಮಹಿಳಾ ಆಯೋಗ ಸಚಿವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಉತ್ತರ ಮಹಾರಾಷ್ಟ್ರದಲ್ಲಿರುವ ಬೋದ್ವಾಡ್ ನಗರ ಪಂಚಾಯತ್ ಚುನಾವಣಾ ಸಭೆಯಲ್ಲಿ ಶಿವಸೇನೆಯ ಹಿರಿಯ ನಾಯಕ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಗುಲಾಬ್ ರಾವ್ ಹೇಳಿಕೆ ನೀಡುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆಯಲ್ಲಿ ಪಾಟೀಲ್ ತನ್ನ ವಿರೋಧ ಪಕ್ಷದವರಿಗೆ ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಒಮ್ಮೆ ಅಲ್ಲಿನ ರಸ್ತೆಗಳ ಗುಣಮಟ್ಟವನ್ನು ನೋಡಿ ಎಂದು ಸವಾಲೆಸೆದರು.
30 ವರ್ಷಗಳಿಂದ ಯಾರ್ಯಾರು ಶಾಸಕರಾಗಿ ಇದ್ದೀರೋ ಅವರೆಲ್ಲಾ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ರಸ್ತೆಗಳನ್ನು ನೋಡಲೇಬೇಕು. ಅವು ನಿಮಗೆ ಹೇಮಾಮಾಲಿನಿ ಕೆನ್ನೆಯಂತೆ ಕಾಣದೇ ಇದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪಾಟೀಲ್ ಹೇಳಿಕೆ ನೀಡಿದ್ದರು.
ತಮ್ಮ ಪಕ್ಷದ ನಾಯಕ ಹೇಳಿಕೆಯನ್ನು ಸಮರ್ಥಿಸಿಕೊಂಡ ಎಂಪಿ ಸಂಜಯ್ ರಾವತ್, ಈ ರೀತಿಯ ಹೋಲಿಕೆಗಳನ್ನು ಈ ಹಿಂದೆ ಕೂಡ ಮಾಡಲಾಗಿದೆ. ಇದು ಹೇಮಾಮಾಲಿನಿಗೆ ಗೌರವ ನೀಡಿದಂತೆ. ಇದರಲ್ಲಿ ಋಣಾತ್ಮಕ ಅಂಶವೆಂಬುದು ಯಾವುದೂ ಇಲ್ಲ. ಲಾಲು ಯಾದವ್ ಕೂಡ ಇದೇ ರೀತಿಯ ಉದಾಹರಣೆ ನೀಡಿದ್ದರು. ನಾವು ಹೇಮಾಮಾಲಿನಿಯವರನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.