ಕೋವಿಡ್ನಿಂದ ಮೃತಪಟ್ಟ ತಂದೆಯ ನೆನಪಿಗೆ ಮೇಣದ ಪ್ರತಿಮೆ ನಿರ್ಮಿಸಿದ ಪುತ್ರ..! 25-09-2021 1:14PM IST / No Comments / Posted In: Corona Virus News, Corona, Latest News, India, Live News ಕೋವಿಡ್ನಿಂದ ತಂದೆಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ತಂದೆಯ ಮೇಣದ ಪ್ರತಿಮೆ ನಿರ್ಮಿಸಿದ ಘಟನೆಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ಉದ್ಯಮಿ ಅರುಣ್ ಕೋರೆ ಎಂಬವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ನಿಂದ ತಮ್ಮ ತಂದೆ ರಾವ್ ಸಾಹೇಬ್ ಶಾಮ್ರಾವ್ ಕೋರೆಯನ್ನು ಕಳೆದುಕೊಂಡಿದ್ದರು. ಮೃತ ರಾವ್ ಸಾಹೇಬ್ ಕೋರೆಗೆ 55 ವರ್ಷ ವಯಸ್ಸಾಗಿತ್ತು. ಮೃತ ರಾವ್ ಸಾಹೇಬ್ ನಾಗ್ಪುರದಲ್ಲಿ ರಾಜ್ಯ ಅಬಕಾರಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆ ಸಾವಿನಿಂದ ಇಡೀ ಕುಟುಂಬಕ್ಕೆ ಆಘಾತಕ್ಕೆ ಒಳಗಾಗಿತ್ತು. ಕರ್ನಾಟಕದಲ್ಲಿ ಉದ್ಯಮಿಯೊಬ್ಬರು ಮೃತ ಪತ್ನಿಯ ಮೇಣದ ಪ್ರತಿಮೆಯನ್ನು ಮನೆಯಲ್ಲೇ ನಿರ್ಮಿಸಿರುವ ವಿಚಾರವನ್ನು ಯುಟ್ಯೂಬ್ನಲ್ಲಿ ನೋಡಿದ ಪುತ್ರ ಅರುಣ್ ಕೋರೆ ಅದರಂತೆಯೇ ತಮ್ಮ ತಂದೆಯ ಮೇಣದ ಪ್ರತಿಮೆ ನಿರ್ಮಿಸಿದ್ದಾರೆ. ಬೆಂಗಳೂರಿನ ಕಲಾವಿದನಿಂದ ಅರುಣ್ ಕೋರೆ ಈ ಪ್ರತಿಮೆಯನ್ನು ನಿರ್ಮಾಣ ಮಾಡಿಸಿದ್ದಾರೆ. 2 ತಿಂಗಳ ಅವಧಿಯಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ. ಈ ಮೇಣದ ಪ್ರತಿಮೆಯು ಥೇಟ್ ನಮ್ಮ ತಂದೆಯಂತೆಯೇ ಇದೆ. ಈ ವಿಗ್ರಹವು ಅಲುಗಾಡುವುದಿಲ್ಲ. ಹೀಗಾಗಿ ನಮ್ಮ ತಂದೆ ವಿಶ್ರಾಂತಿ ಮಾಡುತ್ತಿದ್ದಾರೆ ಎಂದೇ ನಮಗೆ ಭಾಸವಾಗುತ್ತದೆ ಎಂದು ಕೋರೆ ಹೇಳಿದ್ದಾರೆ. ಪತಿಯ ಮರಣದ ವಾರ್ತೆ ನಮ್ಮ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿತ್ತು. ಇದಾದ ಬಳಿಕ ನನ್ನ ಪುತ್ರ ಹಾಗೂ ಅಳಿಯ ಮೇಣದ ಪ್ರತಿಮೆ ನಿರ್ಮಾಣದ ಬಗ್ಗೆ ಪ್ಲಾನ್ ಮಾಡಿದ್ರು. ಇದು 15 ಲಕ್ಷ ರೂಪಾಯಿ ಮೌಲ್ಯದ ಪ್ರತಿಮೆಯಾಗಿದ್ದು 50 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಈ ಮೂಲಕ ನಾನು ನನ್ನ ಪತಿಯನ್ನು ಮತ್ತೊಮ್ಮೆ ನೋಡಲು ಸಾಧ್ಯವಾಯಿತು ಎಂದು ಲಕ್ಷ್ಮೀ ಹೇಳಿದರು.