ನಾಗ್ಪುರ: ದೇಶದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಇನ್ನೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ. ಅದೆಷ್ಟೋ ಹೆಣ್ಣು ಮಕ್ಕಳ ಬಾಳು ನರಕವಾಗಿದೆ. ವರದಕ್ಷಿಣೆಗಾಗಿ ಗಂಡಿನ ಕುಟುಂಬದವರು ಚಿತ್ರಹಿಂಸೆ ನೀಡುತ್ತಾರೆ. ಹಾಗೆಯೇ ಇಲ್ಲೊಂದೆಡೆ ವರದಕ್ಷಿಣೆ ರೂಪವಾಗಿ ಹಣದ ಜೊತೆ ಆಮೆ ಹಾಗೂ ಲ್ಯಾಬ್ರೋಡಾರ್ ನಾಯಿಯನ್ನು ಕೇಳಿದ ಘಟನೆ ನಡೆದಿದೆ.
ಸದ್ಯ, ವರದಕ್ಷಿಣೆ ಕೇಳಿದ ವರನ ಕುಟುಂಬದ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಔರಾಂಗಬಾದ್ ನಲ್ಲಿ ಈ ಘಟನೆ ನಡೆದಿದೆ. ವರದಕ್ಷಿಣೆಯಾಗಿ 21 ಕಾಲ್ಬೆರಳುಗಳಿರುವ ಆಮೆ ಹಾಗೂ ಕಪ್ಪು ಲ್ಯಾಬ್ರೋಡಾರ್ ಜಾತಿಯ ನಾಯಿಯನ್ನು ಕೇಳಲಾಗಿದೆ. ನಾಗ್ಪುರ ವಾಸಿಯಾಗಿರುವ ವರ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಫೆಬ್ರವರಿಯಲ್ಲಿ ನಿಶ್ಚಿತಾರ್ಥ ನಡೆದಿದ್ದು, ಇದಕ್ಕೂ ಮೊದಲು 2 ಲಕ್ಷ ರೂ. ನಗದು ಹಾಗೂ 10 ಗ್ರಾಂ ಚಿನ್ನವನ್ನು ವರನ ಕುಟುಂಬ ಡೌರಿ ಪಡೆದಿತ್ತು.
ಇಷ್ಟಾದರೂ ಹಣದ ದಾಹ ತೀರದ ವರನ ಕುಟುಂಬಸ್ಥರು ನಿಶ್ಚಿತಾರ್ಥದ ಬಳಿಕ ಯುವತಿಗೆ ಸರಕಾರಿ ಉದ್ಯೋಗ ಮಾಡಿಕೊಡುವ ನೆಪದಲ್ಲಿ 10 ಲಕ್ಷ ರೂ. ಪಡೆದಿದ್ದಾರೆ. ಆದರೆ ಸರಕಾರಿ ಉದ್ಯೋಗ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಮತ್ತೂ ಮುಂದುವರಿದು 21 ಕಾಲ್ಬೆರೆಳಿರುವ ಆಮೆ, ಒಂದು ಕಪ್ಪು ಲ್ಯಾಬ್ರೋಡಾರ್ ಜಾತಿಯ ನಾಯಿ ಹಾಗೂ ಬುದ್ಧ ಪ್ರತಿಮೆಯನ್ನು ವರದಕ್ಷಿಣೆಯಾಗಿ ಕೇಳಿದ್ದಾರೆ.
ವರನ ಕುಟುಂಬಸ್ಥರು ಕೇಳಿರುವ ಅಪರೂಪದ ಆಮೆಯ ಬೆಲೆ 5 ಲಕ್ಷ ರೂ.ನಿಂದ 10 ಲಕ್ಷ ರೂ.ಗಳಷ್ಟಿದೆ. ಈ ಆಮೆಯು ಅದೃಷ್ಟ ತರುತ್ತದೆ ಅನ್ನುವ ನಂಬಿಕೆಯಿದೆ. ವಧುವಿನ ಕುಟುಂಬ ಆಮೆಯನ್ನು ತರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದಕ್ಕಾಗಿ ವರನ ಕುಟುಂಬ ಮದುವೆಯನ್ನೇ ರದ್ದುಗೊಳಿಸಿದೆ. ಹೀಗಾಗಿ ವಧು ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ವರನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಾಗಿದೆ.