ಮುಟ್ಟಾದವರು ಗಿಡ ನೆಟ್ಟರೆ ಅದು ಸರಿಯಾಗಿ ಬೆಳೆಯುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಗಿಡ ನೆಡಲು ಅವಕಾಶ ನೀಡದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಇದೀಗ ಈ ಸಂಬಂಧ ದೂರು ದಾಖಲಾಗಿದೆ.
ತ್ರಯಂಬಕೇಶ್ವರ ತಾಲೂಕಿನ ದೇವಗಾಂವ್ ನಲ್ಲಿರುವ ಬಾಲಕಿಯರ ವಸತಿ ಶಾಲೆಯಲ್ಲಿ ಇಂಥದ್ದೊಂದು ಪ್ರಸಂಗ ಘಟನೆ ನಡೆದಿದ್ದು, ಗಿಡ ನೆಡುವ ಸಂದರ್ಭದಲ್ಲಿ ಈ ಶಿಕ್ಷಕ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಅವಕಾಶ ನೀಡಿಲ್ಲ.
ಕಳೆದ ವರ್ಷ ನೆಟ್ಟಿದ್ದ ಗಿಡ ಇನ್ನೂ ಸರಿಯಾಗಿ ಬೆಳೆದಿಲ್ಲ. ಮುಟ್ಟಾದವರು ಇದರ ಬಳಿ ಹೋದ ಕಾರಣ ಹೀಗಾಗಿದೆ ಎಂದು ಆ ಶಿಕ್ಷಕ ಹೇಳಿರುವುದಲ್ಲದೆ, ಮುಟ್ಟಾಗಿರುವವರು ಇನ್ನು ಮುಂದೆ ಗಿಡ ನೆಡದಂತೆ ತಾಕೀತು ಮಾಡಿದ್ದಾನೆ.
ಶೇಕಡ 80 ರಷ್ಟು ಅಂಕಗಳು ಶಾಲಾ ಆಡಳಿತದ ಕೈಯ್ಯಲ್ಲಿರುವ ಕಾರಣ ದೂರು ನೀಡಲು ಈ ವಿದ್ಯಾರ್ಥಿನಿ ಇದುವರೆಗೆ ಭಯಪಟ್ಟಿದ್ದು, ಇದೀಗ ಬುಡಕಟ್ಟು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಅಧಿಕಾರಿಗಳು ಶಾಲಾ ಸಿಬ್ಬಂದಿಯಿಂದ ಈಗ ಮಾಹಿತಿ ಕಲೆ ಹಾಕುತ್ತಿದ್ದಾರೆ.