ಮುಂಬೈ: ಅಮರಾವತಿ ಜಿಲ್ಲೆಯಲ್ಲಿ ಕಾಲರಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ. ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸಾರ್ವಜನಿಕ ಆರೋಗ್ಯ ಇಲಾಖೆ ಬುಧವಾರ ರಾಜ್ಯಾದ್ಯಂತ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜುಲೈ 7 ರಿಂದ ಅಮರಾವತಿ ಜಿಲ್ಲೆಯ ಚಿಕಲ್ದಾರ ಮತ್ತು ಅಮರಾವತಿ ಬ್ಲಾಕ್ ಗಳಲ್ಲಿ ಕಾಲರಾ ಏಕಾಏಕಿ ಕಾಣಿಸಿಕೊಂಡಿದೆ.
ಚಿಖಲ್ದಾರಾ ಬ್ಲಾಕ್ ನ ಮೂರು ಹಳ್ಳಿಗಳಲ್ಲಿ(ಡೋಂಗ್ರಿ, ಕೊಯ್ಲಾರಿ ಮತ್ತು ಘಾನಾ) ಮತ್ತು ಅಮರಾವತಿ ಬ್ಲಾಕ್ ನ ಒಂದು ಹಳ್ಳಿಯಲ್ಲಿ(ನಯಾ ಅಕೋಲಾ) ಇದುವರೆಗೆ 181 ರೋಗಿಗಳು ಪತ್ತೆಯಾಗಿದ್ದು, ಅವರಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು. ಇವರಲ್ಲಿ ಮೂವರು ರೋಗಿಗಳು 24 ರಿಂದ 40 ವರ್ಷ ವಯಸ್ಸಿನವರು ಮತ್ತು ಇಬ್ಬರು 70 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
ಕಾಲರಾ ಪೀಡಿತ ಗ್ರಾಮಗಳಲ್ಲಿ ವೈದ್ಯಕೀಯ ತಂಡಗಳು ಹಗಲಿರುಳು ಕೆಲಸ ಮಾಡುತ್ತಿವೆ. ನೀರಿನ ಗುಣಮಟ್ಟದ ಮೇಲ್ವಿಚಾರಣೆ, ರೋಗಿಗಳ ಕಣ್ಗಾವಲು, ನಿರ್ವಹಣೆ ಮತ್ತು ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಾಗುತ್ತಿದೆ.