ಮುಂಬೈ: ಕರ್ನಾಟಕದಲ್ಲಿ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆಯಡಿ ಭತ್ಯೆ ನೀಡುವ ರೀತಿಯಲ್ಲೇ ಮಹಾರಾಷ್ಟ್ರದಲ್ಲಿ ನಿರುದ್ಯೋಗಿಗಳಿಗೆ ಲಾಡ್ಲಾ ಭಾಯಿ ಯೋಜನೆ ಜಾರಿಗೊಳಿಸಲಾಗಿದೆ.
12ನೇ ತರಗತಿಯಲ್ಲಿ ಉತ್ತೀರ್ಣರಾದ ಯುವಕರಿಗೆ ಮಾಸಿಕ ಆರು ಸಾವಿರ ರೂಪಾಯಿ ನೀಡಲಾಗುವುದು. ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವವರಿಗೆ ಮಾಸಿಕ 8,000 ರೂ., ಪದವೀಧರ ಯುವಕರಿಗೆ ಮಾಸಿಕ 10,000 ರೂ. ನೀಡಲಾಗುವುದು.
ಯೋಜನೆಯಡಿ ಯುವಕರು ಕಾರ್ಖಾನೆ ಸಹಿತ ಯಾವುದೇ ವಾಣಿಜ್ಯ ಚಟುವಟಿಕೆಗಳಲ್ಲಿ ಒಂದು ವರ್ಷ ತೊಡಗಿಕೊಂಡು ಶಿಷ್ಯವೇತನ ಪಡೆಯುತ್ತಾರೆ. ಅನುಭವದ ಆಧಾರದ ಮೇಲೆ ಅವರಿಗೆ ಉದ್ಯೋಗ ಭದ್ರತೆ ಸಿಗಲಿದೆ. ಅಥವಾ ಬೇರೆ ಕಡೆ ಅವರು ಕೆಲಸ ಮಾಡಲು ಅನುಕೂಲವಾಗುತ್ತದೆ.
ಅಕ್ಟೋಬರ್‌ನಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಂಢರಪುರದಲ್ಲಿ ‘ಲಾಡ್ಲಾ ಭಾಯಿ ಯೋಜನೆ’ ಎಂಬ ಹೊಸ ಯೋಜನೆಯನ್ನು ಈ ಘೋಷಣೆ ಮಾಡಿದ್ದಾರೆ.