ಇದೊಂದು ವಿಚಿತ್ರ ಘಟನೆ. ಕಳ್ಳರು ಹಣ, ಬಂಗಾರ, ಬೆಲೆ ಬಾಳುವ ವಸ್ತುವನ್ನ ಕದಿಯೋದು ನೋಡಿದ್ದೇವೆ. ಆದರೆ ಇಲ್ಲಿ ಇಬ್ಬರು ಕಳ್ಳರಿದ್ದಾರೆ, ಅವರು ಕದ್ದಿದ್ದು. ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ವಿದ್ಯುತ್.
ಇದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುರ್ಬಾದ್ ಎಂಬಲ್ಲಿ ನಡೆದ ಘಟನೆ. ಇಲ್ಲಿ ಗಮನಿಸಬೇಕಾಗಿರೋ ಇನ್ನೊಂದು ವಿಚಾರ ಏನಂದ್ರೆ, ಹೀಗೆ 5 ಕೋಟಿ ರೂ. ಮೌಲ್ಯದ ವಿದ್ಯುತ್ ಕದ್ದ ಕಳ್ಳರು ಅಪ್ಪ-ಮಗ ಆಗಿದ್ದಾರೆ.
ಈಗ ವಿದ್ಯುತ್ ಕಳ್ಳತನ ಆರೋಪದ ಮೇಲೆ ತಂದೆ – ಮಗ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (MESDCL)ತಂಡ, ಫಲೇಗಾಂವ್ ಎಂಬಲ್ಲಿ ಕಲ್ಲುಪುಡಿ ಮಾಡುವ ಘಟಕದ ಮೇಲೆ ದಾಳಿ ನಡೆಸಿದಾಗ ಇಲ್ಲಿ ನಡೆಯುತ್ತಿದ್ದ ವಿದ್ಯುತ್ ಕಳ್ಳತನ ಬೆಳಕಿಗೆ ಬಂದಿದೆ.
ತಂದೆ ಚಂದ್ರಕಾಂತ್ ಭಾಂಬ್ರೆ ಮತ್ತು ಪುತ್ರ ಸಚಿನ್ ಇವರಿಬ್ಬರು ಮೀಟರ್ ರೀಡಿಂಗ್ ಅನ್ನು ಟ್ಯಾಂಪರಿಂಗ್ ಮಾಡುವ ಗ್ಯಾಜೆಟ್‌ನ್ನ ಬಳಸಿಕೊಂಡು, ರಿಮೋಟ್ ಮೂಲಕ ವಿದ್ಯುತ್ ಕದಿಯುತ್ತಿದ್ದರು ಅಂತ ಹೇಳಲಾಗುತ್ತಿದೆ. ಕಳೆದ 29 ತಿಂಗಳಿನಿಂದ ಈ ಅಪ್ಪ-ಮಗ ಏನಿಲ್ಲ ಅಂದರೂ 34,09,901 ಯೂನಿಟ್ ವಿದ್ಯುತ್ ಕದ್ದಿದ್ದಾರೆ. ಇದಿಷ್ಟು ಯೂನಿಟ್ ಮೌಲ್ಯ 5 ಕೋಟಿ ರೂಪಾಯಿಗೂ ಹೆಚ್ಚು. ಈಗ ಇವರಿಬ್ಬರ ವಿರುದ್ಧ ವಿದ್ಯುತ್ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುರ್ಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.