ಬೆಳಗಾವಿ: ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಮಹಾರಾಷ್ಟ್ರ ಜತ್ತ ತಾಲೂಕಿನ ರೈತರು ಕರ್ನಾಟಕಕ್ಕೆ ಸೇರುವುದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವ ಪ್ರಸಂಗ ನಡೆದಿದೆ.
ಅಥಣಿಯಲ್ಲಿ ನಡೆದ ಏತನೀರಾವರಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು. ನೀರಾವರಿ ಭರವಸೆ ಕೊಟ್ಟರೆ ನಾವು ಕರ್ನಾಟಕಕ್ಕೆ ಸೇರಲು ಸಿದ್ಧ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರದ ಗಡಿ ಭಾಗದ ಹೊಲಗಳಿಗೆ ಕರ್ನಾಟಕ ನೀರಾವರಿ ಯೋಜನೆಗಳಿಂದ ಸ್ವಲ್ಪ ಪಮಾಣದಲ್ಲಿ ನೀರು ಬಿಡುವಂತೆ ಮನವಿ ಮಾಡಿದರು. ದಯಮಾಡಿ ನಮಗೆ ನೀರು ಕೊಡಿ ಇಲ್ಲವೇ ನಮ್ಮನ್ನು ಕರ್ನಾಟಕ್ಕೆ ಸೇರಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜತ್ತ ತಾಲೂಕಿನ 40ಕ್ಕೂ ಹೆಚ್ಚು ಗ್ರಾಮಗಳು ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಮಹಾರಾಷ್ಟ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಗಮನ ಹರಿಸುತ್ತಿಲ್ಲ. ಇಡೀ ತಾಲೂಕು ಬರಪೀಡಿತವಾಗಿದ್ದು, ಹನಿ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.