ನಿಮ್ಮ ಖಾತೆಗೆ ಅಚಾನಕ್ ಆಗಿ ಲಕ್ಷಾಂತರ ಹಣ ಬಂದರೆ ನಿಮಗೆ ಖುಷಿಯ ಜೊತೆ ಗೊಂದಲವು ಸೃಷ್ಟಿಯಾಗುತ್ತದೆ ಅಲ್ಲವೇ…? ಅದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈತರೊಬ್ಬರ ಜನಧನ್ ಖಾತೆಗೆ ಅಚಾನಕ್ ಆಗಿ 15 ಲಕ್ಷ ಜಮೆ ಆಗಿದೆ.
ರೈತರೂ ಕೂಡ ಇಷ್ಟು ಮೊತ್ತದ ಹಣ ನೋಡಿ ಅಚ್ಚರಿ ವ್ಯಕ್ತಪಡಿಸಿದರೂ, ಬಳಿಕ 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ನಾಗರಿಕರ ಖಾತೆಗೆ 15 ಲಕ್ಷ ಹಣ ಜಮೆ ಮಾಡುವ ಭರವಸೆ ಅಂತೆ ಹಣ ಹಾಕಿದ್ದಾರೆ ಎಂದು ಸುಮ್ಮನಾಗಿದ್ದಾರೆ. ಜೊತೆಗೆ ಇಷ್ಟು ದೊಡ್ಡ ಮೊತ್ತದ ಹಣ ಹಾಕಿದ್ದಕ್ಕೆ ಧನ್ಯವಾದ ಸಲ್ಲಿಸಿ ಅವರಿಗೆ ಪತ್ರವನ್ನು ಬರೆದಿದ್ದಾರೆ. ಆದರೆ ಕಡೆಗೆ ಆಗಿದ್ದು ಮಾತ್ರ ಊಹೆಗೆ ನಿಲುಕುವುದಿಲ್ಲ.
ಮಹಾರಾಷ್ಟ್ರದ, ಔರಂಗಾಬಾದ್ನ ಪೈಠಾಣ್ ತಾಲೂಕಿನ ಜ್ಞಾನೇಶ್ವರ್ ಓಟೆ ಅವರ ಜನಧನ್ ಖಾತೆಗೆ 15 ಲಕ್ಷ ಹಣ ಜಮಾವಣೆ ಆಗಿದೆ. ಜ್ಞಾನೇಶ್ವರ್ ಅವರು, ಇಷ್ಟು ದೊಡ್ಡ ಮೊತ್ತದ ಹಣ ತನ್ನ ಖಾತೆಯಲ್ಲಿ ಕಂಡಾಕ್ಷಣ ಅಚ್ಚರಿಗೊಂಡು ಕೆಲ ತಿಂಗಳು ಕಾಲ ಸುಮ್ಮನಿದ್ದರೂ. ಅಷ್ಟು ದಿನಗಳ ಬಳಿಕವೂ ಖಾತೆಯಲ್ಲಿ ಹಣ ಇರುವುದರಿಂದ ಅನುಮಾನಗೊಂಡು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ.
ಕಿಮ್ಸ್ ಆಡಳಿತಾಧಿಕಾರಿ ಹುದ್ದೆಗಾಗಿ ಅಧಿಕಾರಿಗಳಿಬ್ಬರ ಕಿತ್ತಾಟ
ಅವರ ಸುಂದರ ಕನಸನ್ನು ನುಚ್ಚುನೂರು ಗೊಳಿಸುವಂತೆ, ಇದೆಲ್ಲಾ ನಡೆದ ಆರು ತಿಂಗಳ ಬಳಿಕ ಬ್ಯಾಂಕ್ ಅಧಿಕಾರಿಗಳು ರೈತನ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಮಾಡಿರುವುದನ್ನ ಅರಿತು, ಕೂಡಲೇ ಆತನನ್ನು ಸಂಪರ್ಕಿಸಿದ್ದಾರೆ. ನಿಮ್ಮ ಖಾತೆಗೆ ತಪ್ಪಾಗಿ ಹಣ ಜಮೆ ಆಗಿದೆ, ಈ ಹಿನ್ನೆಲೆ ಪೂರ್ಣ ಮೊತ್ತವನ್ನ ಹಿಂದುರುಗಿಸಿ ಎಂದು ನೋಟಿಸ್ ನೀಡಿದ್ದಾರೆ.
ಅಂದಹಾಗೇ ಅಭಿವೃದ್ಧಿ ಉದ್ದೇಶಗಳಿಗಾಗಿ ಪಿಂಪಲ್ವಾಡಿ ಗ್ರಾಮ ಪಂಚಾಯಿತಿಗೆ ಹಣವನ್ನು ಹಂಚಿಕೆ ಮಾಡಲಾಗಿತ್ತು ಆದರೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳ ತಪ್ಪಿನಿಂದಾಗಿ, ಜ್ಞಾನೇಶ್ವರ್ ಅವರ ಖಾತೆಗೆ ಮೊತ್ತ ಜಮೆಯಾಗಿ, ಈ ಎಡವಟ್ಟು ನಡೆದಿದೆ.
ರೈತ ಸಂಪೂರ್ಣ ಹಣವನ್ನು ತಮ್ಮ ಕನಸಿನ ಮನೆ ಕಟ್ಟಿಸಲು ಬಳಸಿಕೊಂಡಿದ್ದಾರೆ. ಈ ಹಣವನ್ನು ಪ್ರಧಾನಿ ಮೋದಿ ನನ್ನ ಖಾತೆಗೆ ಜಮಾ ಮಾಡಿದರು ಎಂದುಕೊಂಡಿದ್ದೆ. ಆದರೆ ತಪ್ಪಾಗಿ ಜಮೆಯಾಗಿದೆ ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅವರು ಕೇಳಿಕೊಂಡಂತೆ ಸಂಪೂರ್ಣ ಹಣ ನೀಡುತ್ತೇನೆ. ಈಗಾಗಲೇ 6 ಲಕ್ಷ ಪಾವತಿಸಿದ್ದೇನೆ. ಇನ್ನುಳಿದ 9ಲಕ್ಷವನ್ನು ಮುಂದಿನ ದಿನಗಳಲ್ಲಿ ಪಾವತಿ ಮಾಡುತ್ತೇನೆ ಎಂದು ಜ್ಞಾನೇಶ್ವರ್ ಹೇಳಿಕೆ ನೀಡಿದ್ದಾರೆ.