ಕೊಲ್ಹಾಪುರ್: ಮಹಾರಾಷ್ಟ್ರದ ಕೊಲ್ಹಾಪುರದಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಮಹಿಳೆಯನ್ನು ಮನೆಯಿಂದ ಹೊರಹಾಕಿ ವಿಚ್ಛೇದನ ನೀಡಲು ಪತಿರಾಯ ಮುಂದಾಗಿದ್ದಾನೆ.
ಕಳೆದ ವರ್ಷ ಮದುವೆಯಾಗಿದ್ದ ಇಬ್ಬರು ಸಹೋದರಿಯರು ತಮ್ಮ ಗಂಡಂದಿರಿಂದ ವಿಚ್ಛೇದನ ಪಡೆಯುವ ಆತಂಕದಲ್ಲಿದ್ದಾರೆ. ಸಹೋದರಿಯರಲ್ಲಿ ಒಬ್ಬರು ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
2020 ರ ನವೆಂಬರ್ 27 ರಂದು ಕೊಲ್ಹಾಪುರದಲ್ಲಿ ಸಹೋದರಿಯರು ಹಾಗೂ ಸಹೋದರರ ಮದುವೆ ನೆರವೇರಿದೆ. ಎರಡೂ ಕುಟುಂಬದವರು ಕಂಜರಭಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮದುವೆಯಾದ ನಂತರ ಯುವತಿ ಕನ್ಯತ್ವ ಪರೀಕ್ಷೆಯಲ್ಲಿ ಪಾಸ್ ಆಗುವುದು ಈ ಸಮುದಾಯದ ವಿವಾದಾತ್ಮಕ ಸಂಪ್ರದಾಯವಾಗಿದೆ. ಮದುವೆ ನಂತರ ತಮ್ಮ ಗಂಡಂದಿರೊಂದಿಗೆ ಪ್ರತ್ಯೇಕ ಕೋಣೆಗಳಲ್ಲಿ ಬಿಳಿ ಬಟ್ಟೆಯ ಮೇಲೆ ಅವರು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಟ್ಟೆಯ ಮೇಲೆ ರಕ್ತದ ಕಲೆಯನ್ನು ವಧುವಿನ ಕನ್ಯತ್ವಕ್ಕೆ ಪುರಾವೆ ಎಂದು ಈ ಸಮುದಾಯದಲ್ಲಿ ಪರಿಗಣಿಸಲಾಗುತ್ತದೆ.
ಒಬ್ಬಳು ಕನ್ಯತ್ವ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ಮತ್ತೊಬ್ಬಳ ರಕ್ತಸ್ರಾವವಾಗದ ಕಾರಣ ಆಕೆ ಮದುವೆಗೆ ಮೊದಲೇ ಬೇರೆ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ. ಇದಾದ ನಂತರ ಸಹೋದರರು ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡಲು ಮುಂದಾಗಿ 10 ಲಕ್ಷ ರೂಪಾಯಿ ಪರಿಹಾರ ಕೋರಿದ್ದಾರೆ. ಸಂಬಂಧ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ. ಪತ್ನಿಯರನ್ನು ತವರು ಮನೆಗೆ ವಾಪಸ್ ಕಳುಹಿಸಿದ್ದಾರೆ.
ಸಹೋದರಿಯರ ತಾಯಿ ಜಾತಿ ಪಂಚಾಯತ್ ಸದಸ್ಯರನ್ನು ಸಂಪರ್ಕಿಸಿದಾಗ ಈ ವಿಷಯ ಪರಿಹರಿಸಲು 40 ಸಾವಿರ ರೂ. ಪಡೆದುಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಪಂಚಾಯಿತಿ ನಡೆಸಿ ವಿವಾಹ ಬಂಧನಕ್ಕೆ ಅಂತ್ಯ ಹಾಡಲು ಸಮ್ಮತಿಸಿದ್ದಾರೆ. ಸಮುದಾಯದಿಂದ ಸಹೋದರಿಯರ ಕುಟುಂಬವನ್ನು ಬಹಿಷ್ಕರಿಸಲಾಗಿದೆ.
ನೊಂದ ಸಹೋದರಿಯರು ಮತ್ತು ಅವರ ತಾಯಿ ನೆರವಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅವರಿಂದ ದೂರು ಪಡೆದ ಪೊಲೀಸರು ಐಪಿಸಿ ಸೆಕ್ಷನ್ ಹಾಗೂ ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರ ಕಾಯ್ದೆ ಸಂಬಂಧಿತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.