ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ದೌಂಡ್ ತೆಹಸಿಲ್‌ನಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಬಲಿಯಾದವರನ್ನು ಸುನೀಲ್ ಭೇಲೇರಾವ್(44), ಅವರ ಪತ್ನಿ ಆದಿಕಾ ಭೇಲೇರಾವ್(37) ಮತ್ತು ಅವರ ಮಗ ಪರಶುರಾಮ್(18) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಪಕ್ಕದ ಮನೆಗೆ ವಿದ್ಯುತ್ ಸರಬರಾಜು ಕೇಬಲ್ ಭೇಲೇರಾವ್ ಕುಟುಂಬದ ಮನೆಯ ಮೇಲೆ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಕೇಬಲ್ ಸಪೋರ್ಟ್ ಗೆ ಇದ್ದ ರಾಡ್ ಬಾಗಿ ಸುನೀಲ್ ಮನೆಯ ಟಿನ್ ಶೆಡ್‌ಗೆ ತಗುಲಿ ದುರಂತ ಸಂಭವಿಸಿದೆ.
ಟಿನ್ ಶೆಡ್ ಬಳಿ ಲೋಹದ ತಂತಿಯ ಮೇಲೆ ನೇತಾಡುತ್ತಿದ್ದ ಬಟ್ಟೆಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ ಸುನೀಲ್ ಭೇಲೇರಾವ್ ಅವರಿಗೆ ಮೊದಲು ವಿದ್ಯುತ್ ಸ್ಪರ್ಶಿಸಿದೆ. ಅವನ ಮಗ ಪರಶುರಾಮ್ ತನ್ನ ತಂದೆಗೆ ಸಹಾಯ ಮಾಡಲು ಧಾವಿಸಿದ್ದು, ಅವರೂ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ಅಲ್ಲೇ ಇದ್ದ ಆದಿಕಾ ಭೇಲೆರಾವ್ ತನ್ನ ಕುಟುಂಬವನ್ನು ಉಳಿಸಲು ಪ್ರಯತ್ನಿಸಿ ಅವರೂ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ದುರಂತವೆಂದರೆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಯವತ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ನಾರಾಯಣ ದೇಶಮುಖ್, ನಾವು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.