ನವದೆಹಲಿ: ದೇಶದ ಗಮನ ಸೆಳೆದ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರುವ ಕೇರಳದ ವಯನಾಡು ಸೇರಿದಂತೆ ಎರಡು ಲೋಕಸಭಾ ಕ್ಷೇತ್ರಗಳು, ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದೇಶದ 48 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಕೂಡ ಇಂದೇ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಶೇಕಡ 60ರಷ್ಟು ಮತದಾನವಾಗಿದ್ದು, ಜಾರ್ಖಂಡ್ 81 ಕ್ಷೇತ್ರಗಳಲ್ಲಿ ಶೇಕಡ 68 ರಷ್ಟು ಮತದಾನವಾಗಿದೆ.
ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ NCP, ಏಕನಾಥ್ ಶಿಂಧೆಯವರ ಶಿವಸೇನೆ ಮತ್ತು ಬಿಜೆಪಿ ಒಳಗೊಂಡ ಮಹಾಯುತಿ, ಶರದ್ ಪವಾರ್ ಅವರ NCP, ಶಿವಸೇನೆ –ಯುಬಿಟಿ, ಕಾಂಗ್ರೆಸ್ ಒಳಗೊಂಡ ಮಹಾವಿಕಾಸ ಅಘಾಡಿ ನಡುವೆ ಯಾರಿಗೆ ಅಧಿಕಾರ ಸಿಗಲಿದೆ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಲಿದೆ. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮಹಾಯುತಿ ಅಧಿಕಾರಕ್ಕೇರಲಿದೆ ಎಂದು ಹೇಳಲಾಗಿದೆ.
ಜಾರ್ಖಂಡ್ ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಜೆಎಂಎಂ ಮತ್ತು ಕಾಂಗ್ರೆಸ್ ಪ್ರಯತ್ನಿಸಿವೆ. ಐದು ವರ್ಷದ ಬಳಿಕ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಇದೆ.