ನಾಸಿಕ್: ಮಹಾರಾಷ್ಟ್ರದ ನಾಸಿಕ್ ಗ್ರಾಮಾಂತರ ಠಾಣೆ ಪೊಲೀಸರು ಇಗತ್ ಪುರಿಯಲ್ಲಿ ಡ್ರಗ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ 22 ಜನರನ್ನು ವಶಕ್ಕೆ ಪಡೆಯಲಾಗಿದೆ.
ಇಗತ್ ಪುರಿಯ ಖಾಸಗಿ ಬಂಗಲೆಯೊಂದರಲ್ಲಿ ಡ್ರಗ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಹುಟ್ಟುಹಬ್ಬದ ಈ ಪಾರ್ಟಿಯಲ್ಲಿ ಬಳಕೆ ಮಾಡಿದ್ದ ಕೊಕೇನ್ ಮತ್ತು ಇತರೆ ಡ್ರಗ್ಸ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರಲ್ಲಿ 10 ಪುರುಷರು ಮತ್ತು 12 ಮಂದಿ ಮಹಿಳೆಯರು ಸೇರಿದ್ದಾರೆ. ಪುರುಷರು ಮುಂಬೈನ ಉದ್ಯಮಿಗಳಾಗಿದ್ದು, ಒಬ್ಬ ಬುಕ್ಕಿ ಇದ್ದಾನೆ. ಬಂಧಿತ 12 ಮಹಿಳೆಯರಲ್ಲಿ ಆರು ಮಂದಿ ವಿವಿಧ ವೆಬ್ ಸರಣಿಗಳಲ್ಲಿ ಅಭಿನಯಿಸಿದ ನಟಿಯರು ಮತ್ತು ಮಾಡೆಲ್ ಗಳು ಕೂಡ ಇದ್ದಾರೆ. ಇಬ್ಬರು ನೃತ್ಯ ನಿರ್ದೇಶಕರು. ಇರಾನ್ ಮೂಲದ ಮಾಡೆಲ್ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಕೂಡ ಇದ್ದಾರೆ.
ಇವರೆಲ್ಲರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತೆ ಎಂಬುದನ್ನು ಆಧರಿಸಿ ತನಿಖೆ ನಡೆಸಲಾಗಿದೆ. ನಾಸಿಕ್ ಎಸ್ಪಿ ಸಚಿನ್ ಪಾಟೀಲ್ ಅವರು ಈ ಬಗ್ಗೆ ಮಾತನಾಡಿ, ದಾಳಿಯ ವೇಳೆ ಕೊಕೇನ್ ಮತ್ತು ಇತರ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಪಾರ್ಟಿಯ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸಿರುವ ಸಾಧ್ಯತೆಯನ್ನು ಕೂಡ ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.