ಮುಂಬೈ: ಮಹಾರಾಷ್ಟ್ರದ ಗುತ್ತಿಗೆ ನೌಕರನೊಬ್ಬ ರಾಜ್ಯ ಸರ್ಕಾರಕ್ಕೆ 21 ಕೋಟಿ ವಂಚಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಹಗರಣ ಬೆಳಕಿಗೆ ಬಂದಿದೆ.
ಛತ್ರಪತಿ ಸಂಭಾಜಿ ನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣ ಕಚೇರಿಯಲ್ಲಿ ಪ್ರಮುಖ ಆರೋಪಿಯಾಗಿರುವ ಹರ್ಷಕುಮಾರ್ ಕ್ಷೀರಸಾಗರ ಗುತ್ತಿಗೆ ಆಧಾರದಲ್ಲಿ 13 ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದ. ಈತ ಇನ್ನಿಬ್ಬರು ಉದ್ಯೋಗಿಗಳ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಕ್ರೀಡಾ ಇಲಾಖೆಗೆ ಸೇರಿದ 21.59 ಕೋಟಿ ರೂ. ಲಪಟಾಯಿಸಿದ್ದಾನೆ. ಆರು ತಿಂಗಳ ಹಿಂದೆ ಅಕ್ರಮ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕ್ರೀಡಾ ಇಲಾಖೆ ಹಿರಿಯ ಅಧಿಕಾರಿಗಳು ದೂರು ನೀಡಿದ್ದು, ಮುಂಬೈ ಪೊಲೀಸ್ ವಿಭಾಗದ ಆರ್ಥಿಕ ಅಪರಾಧಗಳ ಘಟಕ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಪ್ರಮುಖ ಆರೋಪಿ ಹರ್ಷಕುಮಾರ್ ಕ್ಷೀರಸಾಗರ ತಲೆಮರಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಸಾಮಾನ್ಯ ವೇತನದ ನೌಕರರ ಹರ್ಷಕುಮಾರ್ ಕ್ಷೀರಸಾಗರ ನೋಡ ನೋಡುತ್ತಿದ್ದಂತೆಯೇ ಬಿಎಂಡಬ್ಲ್ಯೂ ಕಾರ್, ಬಿಎಂಡಬ್ಲ್ಯೂ ಬೈಕ್ ಗಳನ್ನು ಖರೀದಿಸಿದ್ದ. ಔರಂಗಬಾದ್ ಏರ್ಪೋರ್ಟ್ ರಸ್ತೆಯ ಅಪಾರ್ಟ್ಮೆಂಟ್ ವೊಂದರಲ್ಲಿ 4 ಬಿ.ಹೆಚ್.ಕೆ. ಫ್ಲ್ಯಾಟ್ ಖರೀದಿಸಿ ಪ್ರಿಯತಮೆಗೆ ಗಿಫ್ಟ್ ಕೊಟ್ಟಿದ್ದ. ವಜ್ರಖಚಿತ ವಸ್ತುಗಳನ್ನು ಕೂಡ ಖರೀದಿಸಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಈ ಹಗರಣದಲ್ಲಿ ಭಾಗಿಯಾಗಿರುವ ಮಹಿಳಾ ಗುತ್ತಿಗೆ ನೌಕರರೊಬ್ಬರ ಪತಿ 35 ಲಕ್ಷ ರೂಪಾಯಿ ಮೌಲ್ಯದ ಎಸ್.ಯು.ವಿ. ಖರೀದಿಸಿದ್ದು, ಈ ವಾಹನದಲ್ಲಿಯೇ ಹರ್ಷಕುಮಾರ್ ಕ್ಷೀರಸಾಗರ ನಾಪತ್ತೆಯಾಗಿದ್ದಾನೆ.
ಗುತ್ತಿಗೆ ನೌಕರನಾಗಿದ್ದ ಹರ್ಷಕುಮಾರ್ ಅಲ್ಲಿಯೇ ಗುತ್ತಿಗೆ ಆಧಾರದಲ್ಲಿ ಅಕೌಂಟೆಂಟ್ ಆಗಿದ್ದ ಯಶೋದಾ ಶೆಟ್ಟಿ ಮತ್ತು ಅದೇ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಆಕೆಯ ಪತಿ ಬಿ.ಕೆ. ಜೀವನ್ ಅವರೊಂದಿಗೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿದ್ದಾನೆ.