ಮುಂಬೈ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದದವರಿಗೆ 5000 ರೂ.ನಿಂದ 10,000 ರೂ.ವರೆಗಿನ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಏಕನಾಥ ಶಿಂಧೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 2018 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರ ಪರಿಚಯಿಸಿದ ಈ ಯೋಜನೆಯನ್ನು 2020 ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ(MVA) ರದ್ದುಗೊಳಿಸಿತ್ತು. ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಜುಲೈ 14 ರಂದು 1975 ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿದ್ದ ರಾಜಕೀಯ ಕಾರ್ಯಕರ್ತರಿಗೆ ಮೀಸಲಾದ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ನಿರ್ಧರಿಸಿದೆ.
2014 ಮತ್ತು 2019 ರ ನಡುವೆ ಅಧಿಕಾರದಲ್ಲಿದ್ದ ಫಡ್ನವೀಸ್ ಸರ್ಕಾರವು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ವಿಧಿಸಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರಿಗೆ ಪಿಂಚಣಿ ನೀಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.
1975 ಮತ್ತು 1977 ರ ನಡುವೆ ಅವರು ಎದುರಿಸಿದ ಜೈಲು ಶಿಕ್ಷೆಯ ಆಧಾರದ ಮೇಲೆ ಪಿಂಚಣಿ ಮೊತ್ತವು 5,000 ರೂ.ನಿಂದ 10,000 ರೂ.ರಷ್ಟಿತ್ತು. ಒಂದು ತಿಂಗಳಿಗಿಂತ ಕಡಿಮೆ ಅಥವಾ ಒಂದು ತಿಂಗಳವರೆಗೆ ಜೈಲು ಶಿಕ್ಷೆಗೆ ಒಳಗಾದ ಯಾರಾದರೂ 5,000 ರೂ.ಪಡೆಯುತ್ತಾರೆ. ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದವರು ಮತ್ತು ಅದಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದವರಿಗೆ 10,000 ರೂ. ಸಿಗುತ್ತದೆ.
ಇದಲ್ಲದೇ, ಗ್ರಾಮ ಸರಪಂಚ್, ನಗರಸಭೆ, ನಗರ ಪಂಚಾಯಿತ್ ಅಧ್ಯಕ್ಷರ ಆಯ್ಕೆಗೆ ನೇರ ಚುನಾವಣೆ ನಡೆಸುವ ನಿಯಮ ಮರು ಜಾರಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಪ್ರಮುಖವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಇಳಿಕೆ ಮಾಡಲಾಗಿದೆ. ಪೆಟ್ರೋಲ್ ದರ ಲೀಟರ್ ಗೆ 5 ರೂಪಾಯಿ ಮತ್ತು ಡೀಸೆಲ್ ದರ ಲೀಟರ್ ಗೆ 3 ರೂಪಾಯಿ ಕಡಿಮೆ ಮಾಡಲಾಗಿದ್ದು, ಗರುವಾರ ಮಧ್ಯರಾತ್ರಿಯಿಂದಲೇ ದರ ಪರಿಷ್ಕರಣೆ ಜಾರಿಗೆ ಬಂದಿದೆ.