ಮುಂಬೈ: ಆಗಸ್ಟ್ 9 ರಂದು ಸಂಪುಟ ವಿಸ್ತರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಗರಾಭಿವೃದ್ಧಿ ಇಲಾಖೆ ಉಳಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಗೃಹ ಮತ್ತು ಹಣಕಾಸು ಖಾತೆ ಹಂಚಿಕೆ ಮಾಡಲಾಗಿದೆ.
ಆದಿತ್ಯ ಠಾಕ್ರೆ ಅವರು ಈ ಹಿಂದೆ ನಿರ್ವಹಿಸಿದ್ದ ಪರಿಸರ ಖಾತೆಯನ್ನು ಸಹ ಶಿಂಧೆ ಇಟ್ಟುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.
ಬಿಜೆಪಿ ಶಾಸಕ ರಾಧಾಕೃಷ್ಣ ವಿಖೆ ಪಾಟೀಲ್ ಅವರನ್ನು ನೂತನ ಕಂದಾಯ ಸಚಿವರನ್ನಾಗಿ ಮಾಡಲಾಗಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಇಲಾಖೆಗಳನ್ನೂ ಅವರು ನಿರ್ವಹಿಸಲಿದ್ದಾರೆ. ಬಿಜೆಪಿಯ ಹಿರಿಯ ಶಾಸಕ ಸುಧೀರ್ ಮುಂಗಂತಿವಾರ್ ಅವರು ಅರಣ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೀನುಗಾರಿಕೆಯ ನೇತೃತ್ವ ವಹಿಸಲಿದ್ದು, ರಾಜ್ಯ ಬಿಜೆಪಿ ಮಾಜಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳನ್ನು ಮುನ್ನಡೆಸಲಿದ್ದಾರೆ.
ಶಿವಸೇನೆ ಶಾಸಕ ತಾನಾಜಿ ಸಾವಂತ್ ರಾಜ್ಯದ ನೂತನ ಆರೋಗ್ಯ ಸಚಿವರಾಗಿದ್ದಾರೆ. ಸೇನೆಯ ಇತರ ಶಾಸಕರಾದ ಅಬ್ದುಲ್ ಸತಾರ್ ಮತ್ತು ದೀಪಕ್ ಕೇಸರ್ಕರ್ ಅವರಿಗೆ ಕ್ರಮವಾಗಿ ಕೃಷಿ ಮತ್ತು ಶಾಲಾ ಶಿಕ್ಷಣ ಇಲಾಖೆಗಳನ್ನು ಹಂಚಿಕೆ ಮಾಡಲಾಗಿದೆ. ಗುಲಾಬ್ರಾವ್ ಪಾಟೀಲ್ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವರಾಗಿದ್ದರೆ, ಸಂಜಯ್ ರಾಥೋಡ್ ಅವರು ಆಹಾರ ಮತ್ತು ಔಷಧ ಆಡಳಿತ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.
ಬಿಜೆಪಿಯ ಗಿರೀಶ್ ಮಹಾಜನ್ ಅವರು ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾಗಿದ್ದಾರೆ. ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಸಹ ನೋಡಿಕೊಳ್ಳುತ್ತಾರೆ. ಬಿಜೆಪಿ ಶಾಸಕ ವಿಜಯಕುಮಾರ್ ಗವಿತ್ ಬುಡಕಟ್ಟು ಅಭಿವೃದ್ಧಿಯನ್ನು ನಿಭಾಯಿಸಲಿದ್ದಾರೆ. ಶಿವಸೇನಾ ಶಾಸಕ ಉದಯ್ ಸಾಮಂತ್ ಕೈಗಾರಿಕಾ ಸಚಿವರಾಗಿದ್ದಾರೆ.
ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ 40 ದಿನಗಳ ನಂತರ ಶಿಂಧೆ ತಮ್ಮ ಸಂಪುಟವನ್ನು ವಿಸ್ತರಿಸಿದರು. ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಪಾಳಯದಿಂದ ತಲಾ ಒಂಬತ್ತು ಮಂದಿ ಕ್ಯಾಬಿನೆಟ್ ಗೆ ಸೇರ್ಪಡೆಗೊಂಡರು.