ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯ ಮಠದಲ್ಲಿ ನಡೆದ ಆಘಾತಕಾರಿ ಅಪರಾಧದ ಪ್ರಕರಣದಲ್ಲಿ 58 ವರ್ಷದ ಬೌದ್ಧ ಸನ್ಯಾಸಿ ಭಾನುವಾರ ಸಹ ಮಹಿಳಾ ಬೋಧಕಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಣಯ ಸಂಬಂಧದ ವೈಫಲ್ಯದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಬೋಧಕಳನ್ನು ಕುಸುಮ್ ಚವಾಣ್ ಎಂದು ಗುರುತಿಸಲಾಗಿದೆ. ಸುಮಾರು 12 ವರ್ಷಗಳ ಕಾಲ ಧಮ್ಮಾನಂದ್ ಥೆರೊ ಅಲಿಯಾಸ್ ರಾಮದಾಸ್ ಮೆಶ್ರಾಮ್ ಎಂದು ಗುರುತಿಸಲ್ಪಟ್ಟ ಸಹ ಸನ್ಯಾಸಿಯೊಂದಿಗೆ ಆಕೆ ನೇರ ಸಂಬಂಧದಲ್ಲಿದ್ದಳು. ಇಬ್ಬರೂ ಪಿಪ್ಲಾ ಪ್ರದೇಶದ ಶಿವಾಲಿ ಭಿಕ್ಷು ನಿವಾಸದ ಮಠದಲ್ಲಿ ತಂಗಿದ್ದರು.
ಕುಸಮ್ ಚವಾಣ್ ಮತ್ತು ಥೆರೊ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಂತರ ಆಕೆಯ ಮೊಬೈಲ್ನಲ್ಲಿ ಕೆಲವು ಆಕ್ಷೇಪಾರ್ಹ ವಿಡಿಯೋ ಕಂಡುಬಂದಿದ್ದು, ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಥೆರೋ ಚೂರಿಯಿಂದ ಕುಸುಮ್ ಗೆ ಇರಿದಿದ್ದಾನೆ. ತೀವ್ರಗಾಯಗಳಿಂದ ಆಕೆ ಮೃತಪಟ್ಟಿದ್ದಾಳೆ. ನಂತರ ಗಾಬರಿಯಾದ ಥೆರೊ ಹಗ್ಗ ಬಳಸಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಹಗ್ಗ ತುಂಡಾಗಿದೆ. ತರುವಾಯ, ಅವನು ಸಮೀದಲ್ಲೇ ಇದ್ದ ಬಾವಿಗೆ ಹಾರಿದ್ದಾನೆ. ಕೆಲವರು ಅವನನ್ನು ಬಾವಿಯಿಂದ ಹೊರಗೆ ತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಇನ್ಸ್ ಪೆಕ್ಟರ್ ಪಿಎಂ ಭಟ್ಕರ್ ತಿಳಿಸಿದ್ದಾರೆ. ಕುಸಮ್ ಚವಾಣ್ ಳನ್ನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಕುಸಮ್ ಚವಾಣ್ ಮೊಬೈಲ್ ಫೋನಿನಲ್ಲಿ ಬೇರೆ ಕೆಲವು ಪುರುಷರ ಸಂದೇಶಗಳನ್ನು ನೋಡಿದ ಥರ್ರೊ ಆ ವಿಷಯವಾಗಿ ಅವಳನ್ನು ಪ್ರಶ್ನಿಸಿದ್ದಾನೆ. ವಾದದ ಸಮಯದಲ್ಲಿ ಥೆರೋ ಪುರುಷತ್ವವನ್ನು ಪ್ರಶ್ನಿಸಿದ್ದರಿಂದ ಆಕ್ರೋಶಗೊಂಡು ಹೊಡೆದು ಚಾಕುವಿನಿಂದ ಇರಿದು ಕೊಂದನು ಎಂದು ಹೇಳಲಾಗಿದೆ.