ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನಡುವಿನ ಗುದ್ದಾಟ ಬಯಲಾಗ್ತಿದೆ.
2024 ರ ವಿಧಾನಸಭಾ ಚುನಾವಣೆಗೆ ಶಿವಸೇನೆ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರವಾಗಿ ಎರಡೂ ಪಕ್ಷದ ನಾಯಕರ ನಡುವೆ ವಾಗ್ದಾಳಿ ನಡೆದಿದೆ.
ಶಿವಸೇನೆಗೆ 125 ಕ್ಷೇತ್ರಗಳಿಗಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ನಾವು ಚುನಾವಣೆಯನ್ನೇ ಎದುರಿಸುವುದಿಲ್ಲ ಎಂದು ಶಿಂಧೆ ನೇತೃತ್ವದ ಶಿವಸೇನೆ ನಾಯಕ ಸಂಜಯ್ ಗಾಯಕ್ವಾಡ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
2024 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವೆ ಸೀಟು ಹಂಚಿಕೆ ಸೂತ್ರವನ್ನು ನಿರ್ಧರಿಸಲಾಗಿದೆ ಎಂದು ಶನಿವಾರ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ಹೇಳಿದ್ದರು. ಬಿಜೆಪಿ ಸರಿಸುಮಾರು 240 ಸ್ಥಾನಗಳಿಗೆ ಮತ್ತು ಶಿವಸೇನೆ 48 ಸ್ಥಾನಗಳಿಗೆ ಹೋರಾಡುತ್ತದೆ ಎಂದಿದ್ದಾರೆ.
ಶುಕ್ರವಾರ ತಡರಾತ್ರಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಬವಾಂಕುಲೆ ಈ ಘೋಷಣೆ ಮಾಡಿದರು. ಆದರೆ ನಂತರ ಶನಿವಾರದಂದು ಸೀಟು ಹಂಚಿಕೆ ಸೂತ್ರ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ವಾದಿಸಿದರು.
ಶಿವಸೇನೆ ಪಕ್ಷವು ಕನಿಷ್ಠ 130-140 ಸ್ಥಾನಗಳಿಗೆ ಹೋರಾಡಲಿದೆ ಎಂದು ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ. ರಾಜ್ಯ ವಿಧಾನಸಭೆಯು ಒಟ್ಟು 288 ಸ್ಥಾನಗಳನ್ನು ಹೊಂದಿದೆ.
ಶಿವಸೇನೆಯಾಗಿ ನಾವು ಕನಿಷ್ಠ 130 ರಿಂದ 140 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದೇವೆ. ಆ ಪಕ್ಷ (ಬಿಜೆಪಿ) ನಮಗಿಂತ ದೊಡ್ಡದಾಗಿರುವುದರಿಂದ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಶಿವಸೇನೆಯಾಗಿ ನಾವು 125 ಸ್ಥಾನಗಳಿಗಿಂತ ಕಡಿಮೆ ಸ್ಪರ್ಧಿಸುವುದಿಲ್ಲ. ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪಕ್ಷದ ನಾಯಕರು ಅವರನ್ನು (ಬಾವಂಕುಲೆ) ಖಂಡಿಸಬೇಕು ಎಂದು ಗಾಯಕ್ವಾಡ್ ಹೇಳಿದ್ದಾರೆ.
“ನಾನು ಅವರಿಗೆ ಹೇಳಲು ಬಯಸುತ್ತೇನೆ. ಇದು ಶಿಂಧೆ ಬಣವಲ್ಲ, ಆದರೆ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಶಿವಸೇನೆ. ಬಿಜೆಪಿ-ಶಿವಸೇನೆಯ ಈ ಮೈತ್ರಿಯನ್ನು ಬಾಳಾಸಾಹೇಬರು ಮಾಡಿದ್ದಾರೆ. ನಮ್ಮ ಮೈತ್ರಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆಗಿದೆ. ಮೈತ್ರಿ ವಿಚಾರ ಈ ನಾಯಕರ ಬಳಿಯೇ ಇದೆ. ಬೇರೆ ಯಾವುದೇ ನಾಯಕರು ಯಾವುದೇ ಘೋಷಣೆ ಮಾಡಿದರೆ, ಅವರ ಮಾತಿಗೆ ಯಾವುದೇ ಅರ್ಥವಿಲ್ಲ ಎಂದು ಗುಡುಗಿದರು.