ನವದೆಹಲಿ: ಶೇಕಡ 27 ರಷ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಶೇಕಡ 27 ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದ್ದು, ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.
ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ಪೀಠದಿಂದ ತಡೆಯಾಜ್ಞೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಶೇಕಡ 27 ರಷ್ಟು ಮೀಸಲಾತಿ ಕಲ್ಪಿಸಿ ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ತಡೆ ನೀಡಲಾಗಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಒಬಿಸಿ ಅಭ್ಯರ್ಥಿಗಳಿಗೆ ಶೇ.27 ಮೀಸಲಿಟ್ಟಿರುವ ಸೀಟುಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಂದುವರಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 27 ರಷ್ಟು ಒಬಿಸಿ ಕೋಟಾವನ್ನು ಪರಿಚಯಿಸಿದ ಮಹಾರಾಷ್ಟ್ರ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಮತ್ತು ಅದರ ಪರಿಣಾಮವಾಗಿ ರಾಜ್ಯ ಚುನಾವಣಾ ಆಯೋಗವು ಅದನ್ನು ಜಾರಿಗೆ ತರಲು ಹೊರಡಿಸಿದ ಅಧಿಸೂಚನೆಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಆಯೋಗವನ್ನು ಸ್ಥಾಪಿಸದೆ ಮತ್ತು ಸ್ಥಳೀಯ ಸರ್ಕಾರದಲ್ಲಿ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಡೇಟಾವನ್ನು ಸಂಗ್ರಹಿಸದೆ ಕೋಟಾವನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉಳಿದ ಚುನಾವಣಾ ಕಾರ್ಯಕ್ರಮವು ಸಾಮಾನ್ಯ ವರ್ಗ ಸೇರಿದಂತೆ ಇತರ ಮೀಸಲು ಸ್ಥಾನಗಳಿಗೆ ಮುಂದುವರಿಯಬಹುದು ಎಂದು ಹೇಳಿದೆ.