ಇತ್ತೀಚಿಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಇದೇ ಸಂದರ್ಭದಲ್ಲಿ ಉಪಚುನಾವಣೆಯ ಫಲಿತಾಂಶವೂ ಹೊರ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಪ್ರಮುಖ ಕ್ಷೇತ್ರ ಒಂದನ್ನು ಬಿಜೆಪಿ ಕಳೆದುಕೊಂಡಿದೆ.
ಮಹಾರಾಷ್ಟ್ರದ ಕಸಬಾ ಪೇಠ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದ 28 ವರ್ಷಗಳಿಂದ ಗೆಲವು ಸಾಧಿಸಿಕೊಂಡು ಬಂದಿದ್ದು, ಆದರೆ ಇದೇ ಮೊದಲ ಬಾರಿಗೆ ಇಲ್ಲಿ ಸೋಲು ಕಂಡಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್ಸಿನ ರವೀಂದ್ರ ದಂಗೆಕರ್ ಆಯ್ಕೆಯಾಗಿದ್ದು, ಇವರಿಗೆ ಎನ್.ಸಿ.ಪಿ. ಹಾಗೂ ಶಿವಸೇನೆ (ಉದ್ದವ್ ಠಾಕ್ರೆ ಬಣ) ಬೆಂಬಲಿಸಿದ್ದವು.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಅಧಿಕಾರಕ್ಕೆ ಬಂದ ಶಿವಸೇನೆ (ಶಿಂಧೆ ಬಣ) ಹಾಗೂ ಬಿಜೆಪಿ ಮೈತ್ರಿ ನೇತೃತ್ವದ ಸರ್ಕಾರಕ್ಕೆ ಇದು ಮೊದಲ ಚುನಾವಣೆಯಾಗಿತ್ತು. ಕಸಬಾ ಪೇಠ್ ಕ್ಷೇತ್ರದಲ್ಲಿ ಸೋತರೂ ಚಿಂಚ್ವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಜಗಪತ್ ಗೆಲುವು ಸಾಧಿಸಿದ್ದಾರೆ.