ಔರಂಗಾಬಾದ್‌ಅನ್ನು ಛತ್ರಪತಿ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಿದ ಬಳಿಕ ಇದೀಗ ಅಹ್ಮದ್‌ನಗರಕ್ಕೆ ’ಅಹಿಲ್ಯಾ ದೇವಿ ಹೋಳ್ಕರ್ ನಗರ’ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ.
ತನ್ನ ಜೀವಿತಾವಧಿಯಲ್ಲಿ ದೇಶದ ಉದ್ದಗಲಕ್ಕೂ ಇರುವ ಅನೇಕ ದೇಗುಲಗಳ ಪುನರುಜ್ಜೀವನಕ್ಕೆ ಶ್ರಮಿಸಿದ ಇಂದೋರ್‌ನ ರಾಣಿ ಅಹಿಲ್ಯಾ ಬಾಯಿ ಹೋಳ್ಕರ್ ಬಗ್ಗೆ ಮರಾಠಿ ಸಮುದಾಯದಲ್ಲಿ ಅಪಾರವಾದ ಗೌರವವಿದೆ.
ಮಾಳ್ವಾ ಸಾಮ್ರಾಜ್ಯದ ರಾಣಿಯಾಗಿ ಆಳಿದ ಅಹಿಲ್ಯಾಬಾಯಿ ಕೇವಲ ಧರ್ಮ ರಕ್ಷಣೆ ಮಾತ್ರವಲ್ಲದೇ ತನ್ನ ರಾಜ್ಯದಲ್ಲಿ ವ್ಯಾಪಕ ಕೈಗಾರೀಕರಣಕ್ಕೂ ಚಾಲನೆ ನೀಡಿದ್ದರು. ಇಂದಿಗೂ ಸಹ ಅಹಿಲ್ಯಾ ಬಾಯಿ ಹೋಳ್ಕರ್‌ರ ಹೆಸರು ಮರಾಠಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ.