ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಗುರುವಾರ ತಡರಾತ್ರಿ ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲಸ ಮಾಡುತ್ತಿದ್ದ 10 ಕಾರ್ಮಿಕರ ಮೇಲೆ ಕಟ್ಟಡ ಕುಸಿದು ಬಿದ್ದಿದೆ. ಐವರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಸುನಿಲ್ ಗಿಲ್ಬೈಲ್ ಹೇಳಿದರು. ಸ್ಥಳದಲ್ಲಿ ಮುಂಜಾಗ್ರತಾ, ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಕುಸಿತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಮೂವರಿಗೆ ಸಣ್ಣ ಗಾಯಗಳಾಗಿವೆ ಎಂದು ಪುಣೆ ಪೊಲೀಸ್ ಉಪ ಪೊಲೀಸ್ ಆಯುಕ್ತ ರೋಹಿದಾಸ್ ಪವಾರ್ ಹೇಳಿದ್ದಾರೆ.
ಸ್ಥಳೀಯ ಶಾಸಕ ಸುನೀಲ್ ಟಿಂಗ್ರೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ವೀಕ್ಷಿಸಿದರು. ಈ ಸ್ಥಳದಲ್ಲಿ ನಿರ್ಮಾಣ ಕಾರ್ಯ ನಿರಂತರವಾಗಿ 24 ಗಂಟೆಗಳ ಕಾಲ ನಡೆಯುತ್ತದೆ. ಈ ಕಾರ್ಮಿಕರು ದಣಿದಿರಬೇಕು, ಇದು ಅಪಘಾತಕ್ಕೆ ಕಾರಣವಾಗಿರಬಹುದು. ಗಾಯಗೊಂಡವರು ಬಿಹಾರದವರು ಎಂದು ಇತರ ಕಾರ್ಮಿಕರು ತಿಳಿಸಿದ್ದಾರೆ.