ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ 13 ನಕ್ಸಲರು ಸಾವನ್ನಪ್ಪಿದ್ದಾರೆ.
ಪೂರ್ವ ವಿದರ್ಭದ ಗಡ್ ಚಿರೋಲಿಯ ಪೊಟೆಗಾಂವ್ ಮತ್ತು ರಾಜೋಲಿ ನಡುವಿನ ಕಾಡಿನಲ್ಲಿ ಶುಕ್ರವಾರ ಭದ್ರತಾಪಡೆಗಳ ಮುಖಾಮುಖಿಯಲ್ಲಿ 13 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಪೊಲೀಸರ ಸಿ -60 ಯೂನಿಟ್ ಕಮಾಂಡೋಗಳು ಹಳ್ಳಿಯೊಂದರ ಸಮೀಪ ನಕ್ಸಲರ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳು, ಗಣನೀಯ ಸಾಹಿತ್ಯ ಮತ್ತು ದೈನಂದಿನ ಅಗತ್ಯವಿರುವ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗಡಚಿರೋಲಿ ಡಿಐಜಿ ಸಂದೀಪ್ ಪಾಟೀಲ್ ಅವರು ನೀಡಿರುವ ಮಾಹಿತಿಯಂತೆ, ಈ ಕಾರ್ಯಾಚರಣೆ ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ಯಶಸ್ಸು ನೀಡಿದೆ. ಎಟಪಲ್ಲಿಯ ಪೆಯಿಡಿ-ಕೊಟ್ಮಿ ಅರಣ್ಯದಲ್ಲಿ ಶುಕ್ರವಾರ ಮುಂಜಾನೆ ಮಹಾರಾಷ್ಟ್ರ ಪೊಲೀಸರು ಮತ್ತು ನಕ್ಸಲ್ ಅವರ ನಡುವಿನ ಮುಖಾಮುಖಿ ಸಂಭವಿಸಿದೆ. ಕಾಡಿನಲ್ಲಿ ಮಾವೋವಾದಿಗಳು ಇರುವ ಬಗ್ಗೆ ತಿಳಿದುಕೊಂಡ ನಂತರ ಒಂದು ದಿನದ ಹಿಂದೆಯೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದುವರೆಗೆ 13 ಮೃತದೇಹಗಳನ್ನು ಗುರುತಿಸಲಾಗಿದೆ. ಸುತ್ತಲಿನ ಪ್ರದೇಶದಲ್ಲಿ ಶೋಧಕಾರ್ಯ ಮುಂದುವರೆದಿದೆ.