ಮುಂಬೈ: ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆಯಾಗುತ್ತಿದೆ ಶನಿವಾರದಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಚೆಂಬೂರ್ ಮತ್ತು ವಿಕ್ರೋಲಿಯಲ್ಲಿ ಬಹುದೊಡ್ಡ ಅವಗಢ ಸಂಭವಿಸಿದೆ. 4 ಮನೆಗಳು ಕುಸಿದು 14 ಮಂದಿ ಸಾವನ್ನಪ್ಪಿದ್ದಾರೆ.
ಮಹಿಳೆಯರು ಮಕ್ಕಳು ಸೇರಿದಂತೆ ಹದಿನಾಲ್ಕು ಮಂದಿ ಮನೆ ಕುಸಿತದಲ್ಲಿ ಮೃತಪಟ್ಟಿದ್ದಾರೆ. ಇನ್ನಷ್ಟು ಜನ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಮುಂಬೈನ ಚೆಂಬೂರ್ ಪ್ರದೇಶದಲ್ಲಿ ರಾತ್ರಿಯೆಲ್ಲ ಧಾರಾಕಾರ ಮಳೆಯಾಗಿದೆ. ಚೆಂಬೂರ್ ಭಾರತ್ ನಗರದ ಕೊಳಗೇರಿ ಪ್ರದೇಶದಲ್ಲಿ ಗೋಡೆ ಕುಸಿದು 11 ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದ ಭೂಕುಸಿತವಾಗಿ ಮನೆಗಳು ಬಿದ್ದಿವೆ. 4 ಮನೆಗಳಿಗೆ ಹಾನಿಯಾಗಿದ್ದು 13 ಜನರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕದಳದ ಸಿಬ್ಬಂದಿ ಹೇಳಿದ್ದಾರೆ. ಅವಘಡದಲ್ಲಿ ಗಾಯಗೊಂಡವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. NDRF ತಂಡವೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.