
ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಬೀದರ್ ನ ಐವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬೀದರ್ ನ ಲಾಡಗೇರಿಯ 14 ಜನರು ಕುಂಭಮೇಳಕ್ಕೆ ತೆರಳುತ್ತಿದ್ದರು. ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 8 ಜನರು ಗಾಯಗೊಂಡಿರುವ ಮಾಹಿತಿಯಿದೆ. ಘಟನೆ ತೀವ್ರ ನೋವುಂಟುಮಾಡಿದೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದರು.
ಮೃತರ ಪಾರ್ಥಿವ ಶರೀರವನ್ನು ಬೀದರ್ ಗೆ ಕರೆತರುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಗಾಯಾಳುಗಳು ಬೇಗನೇ ಗುಣಮುಖರಾಗಲಿ ಎಂದರು.