ಚಾಮರಾಜನಗರ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಹಾಗೂ ದೇಶದ ರೈತರಿಗೆ ಒಳ್ಳೆಯದಾಗಬೇಕು ಎಂದು 102 ವರ್ಷದ ಅಜ್ಜಿಯೋರ್ವರು ಪಾದಯಾತ್ರೆ ಮೂಲಕ ಮಲೈಮಹದೇಶ್ವರ ಬೆಟ್ಟ ಹತ್ತಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ಮೂಲದ 102 ವರ್ಷದ ಅಜ್ಜಿ ಪಾರ್ವತಮ್ಮ ನಿಷ್ಕಲ್ಮಷವಾದ ಹಾರೈಕೆಯೊಂದಿಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟ ಹತ್ತಿದ್ದು, ಶತಾಯುಷಿ ಅಜ್ಜಿ ಬೆಟ್ಟ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರದಹಾನಿಯಾಗಲಿ, ದೇಶಕ್ಕೆ ಒಳ್ಳೆಯದಾಗಬೇಕು, ರೈತರಿಗೆ ಒಳ್ಳೆಯದಾಗಬೇಕು. ದೇಶದಲ್ಲಿ ಮಳೆ-ಬೆಳೆ ಚನ್ನಾಗಿ ಆಗಬೇಕು. ಪ್ರಾಣಿಗಳಿಗೂ ಒಳಿತಾಗಲಿ,ಎಲ್ಲರಿಗೂ ಕುಡಿಯುವ ನೀರು ಸಿಗಲಿ…ಎಂಬ ಪ್ರಾರ್ಥನೆಯೊಂದಿಗೆ ಅಜ್ಜಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಬರೋಬ್ಬರಿ 18 ಕಿ.ಮೀ ಕಾಲ್ನಡಿಗೆ ಮೂಲಕ ಕೈಯಲ್ಲಿ ಊರುಗೋಲು ಹಿಡಿದು ಶತಾಯುಷಿ ಅಜ್ಜಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದಿದ್ದಾರೆ. ಮೋದಿ ಯಾಕೆ ಮತ್ತೆ ಪ್ರಧಾನಿಯಾಗಬೇಕು ಎಂದು ಕೆಲ ಭಕ್ತರು ಪ್ರಶ್ನಿಸಿದ್ದಾರೆ. ಆಗ ಅಜ್ಜಿ ಇಡೀ ದೇಶಕ್ಕೆ ಒಳ್ಳೆಯದಾಗಲು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದಿದ್ದಾರೆ.
ಸುಮಾರು 5-6 ವರ್ಷಗಳಿಂದ ತಿಪಟೂರಿನ ಪಾರ್ವತಮ್ಮ ಅಜ್ಜಿ ಪಾದಯಾತ್ರೆ ಮೂಲಕವೇ ಮಹದೇಶ್ವರ ಬೆಟ್ಟವನ್ನು ಏರಿತ್ತಿದ್ದಾರೆ. 102 ವರ್ಷದ ಹಿರಿಜೀವದ ಈ ಸಾಹಸಕ್ಕೆ ನಿಜಕ್ಕೂ ಮಾದಪ್ಪ ದೇವರೂ ಬೆರಗಾಗಲೇಬೇಕು.