ಹೈದರಾಬಾದ್: ಆಘಾತಕಾರಿ ಘಟನೆಯಲ್ಲಿ ಅಂಗನವಾಡಿ ಕೇಂದ್ರವೊಂದರಲ್ಲಿ ಬರೋಬ್ಬರಿ 30 ಹಾವಿನ ಮರಿಗಳು ಮತ್ತು ಎರಡು ಚೇಳುಗಳು ಕಂಡುಬಂದಿವೆ.
ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ನೆಲ್ಲಿಕುಡುರು ಮಂಡಲದ ಕೋಟಪಲ್ಲಿ ಅಂಗನವಾಡಿ ಕೇಂದ್ರದಲ್ಲಿ ಹಾವು, ಚೇಳುಗಳು ಪತ್ತೆಯಾಗಿವೆ. ಅದೃಷ್ಟವಶಾತ್ ಯಾವುದೇ ಅಪಾಯವನ್ನುಂಟು ಮಾಡಿಲ್ಲ. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡದೊಳಗೆ ಹಾವು, ಚೇಳುಗಳು ಕಂಡುಬಂದಿದ್ದು ಗ್ರಾಮಸ್ಥರು ಅವುಗಳನ್ನು ತೆರವುಗೊಳಿಸಿದ್ದಾರೆ.
ಅಂಗನವಾಡಿ ಕೇಂದ್ರದ ಆಯಾ ಲಾಚಮ್ಮ ಅವರು ನೆಲದ ಮೇಲೆ ಹಾವು ಹರಿದಾಡುವುದನ್ನು ಗಮನಿಸಿ ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಂಗನವಾಡಿ ಕೇಂದ್ರಕ್ಕೆ ಧಾವಿಸಿದ ಗ್ರಾಮಸ್ಥರು ನೆಲದ ಹಾಸುಗಳನ್ನು ಸರಿಸಿದಾಗ 30 ಹಾವು, ಚೇಳುಗಳು ಕಂಡುಬಂದಿವೆ. ಸ್ಥಳಕ್ಕೆ ಮಕ್ಕಳ ಅಭಿವೃದ್ಧಿ ಸೇವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂಗನವಾಡಿ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ತಿಳಿಸಿದ್ದಾರೆ.
ಕೊರೋನಾ ವೈರಸ್ ಕಾರಣದಿಂದ ಅಂಗನವಾಡಿ ಕೇಂದ್ರವನ್ನು ಹಿಂದೆಯೇ ಮುಚ್ಚಲಾಗಿದೆ. ಮಕ್ಕಳು ಬರುತ್ತಿಲ್ಲ. ಆದರೆ, ಪೌಷ್ಠಿಕ ಆಹಾರ ಪೂರೈಕೆ ನಿಯಮಿತವಾಗಿ ನಡೆಯುತ್ತಿದ್ದು, ಅಂಗನವಾಡಿ ಕೇಂದ್ರಕ್ಕೆ ಗರ್ಭಿಣಿಯರು ಬಾಣಂತಿಯರು ಮತ್ತು ಮಕ್ಕಳು ಬಂದು ಹೋಗುತ್ತಾರೆ. ಇಂತಹ ಕೇಂದ್ರದಲ್ಲಿ ಹಾವುಗಳು ಕಂಡುಬಂದಿದ್ದು ಸುರಕ್ಷತೆಗೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಂಗನವಾಡಿ ಸ್ಥಳಾಂತರಿಸಿದ ನಂತರ ಮಕ್ಕಳನ್ನು ಕಳಿಸುವುದಾಗಿ ಹೇಳಿದ್ದಾರೆ.