ತನ್ನ ಮಾಜಿ ಪ್ರಿಯಕರನನ್ನು ಮರಳಿ ತನ್ನ ಮೋಹಪಾಶಕ್ಕೆ ಪಡೆಯಬಹುದು ಎಂದು 26 ವರ್ಷದ ಯುವತಿಯೊಬ್ಬರಿಗೆ ನಂಬಿಸಿ ಆಕೆಗೆ ವಂಚನೆಯೆಸಗಿದ 33 ವರ್ಷ ವಯಸ್ಸಿನ ಮಾಟಗಾರನೊಬ್ಬನನ್ನು ನವಿ ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಖರ್ಗಾರ್‌ನ ನಿವಾಸಿಯಾಗಿರುವ ಸಂತ್ರಸ್ತೆ, ಬಾಬಾ ಕರೀಂ ಖಾನ್ ಬೆಂಗಾಲಿ ಅಲಿಯಾಸ್ ವಾಸಿಂ ಖಾನ್ ಎಂಬಾತನ ವಿರುದ್ಧ ಈ ಸಂಬಂಧ ದೂರು ಕೊಟ್ಟಿದ್ದು, ತನ್ನ ಬಳಿ 4.57 ಲಕ್ಷ ರೂಪಾಯಿಗಳನ್ನು ಕಿತ್ತಿದ್ದಾನೆ ಎಂದು ಆಪಾದಿಸಿದ್ದಾರೆ. ಉಪನಗರ ರೈಲುಗಳ ಒಳಗೆ ಈ ಬಾಬಾನ ಪೋಸ್ಟರ್‌ಗಳನ್ನು ಕಂಡ ಸಂತ್ರಸ್ತೆ, ’ಬ್ಲಾಕ್ ಮ್ಯಾಜಿಕ್’ ಮಾಡಿ ತನ್ನ ಪ್ರಿಯಕರನನ್ನು ಮರಳಿ ತನ್ನತ್ತ ಬರುವಂತೆ ಮಾಡಬಹುದು ಎಂದು ನಂಬಿದ್ದಾರೆ.
ಕಂತುಗಳಲ್ಲಿ ಈ ದೊಡ್ಡ ಮೊತ್ತವನ್ನು ಉತ್ತರ ಪ್ರದೇಶದ ಮೀರತ್‌ನ ವಂಚಕ ಬಾಬಾನಿಗೆ ಕೊಟ್ಟ ಸಂತ್ರಸ್ತೆಗೆ ತಾನು ಏನೆಲ್ಲಾ ಮಾಡಿದರೂ ಆತ ತನ್ನತ್ತ ಮರಳಿ ಬಾರದೇ ಇದ್ದಾಗ ಆತನ ಬಳಿ ಕೊಟ್ಟ ದುಡ್ಡನ್ನು ಮರಳಿ ಕೇಳಿದ್ದಾರೆ. ಆಗ ಸಂತ್ರಸ್ತೆಗೆ ಬೆದರಿಕೆಯೊಡ್ಡಿದ ಬಾಬಾ, ಆಕೆಯೇನಾದರೂ ಪೊಲೀಸರಿಗೆ ದೂರು ಕೊಟ್ಟಲ್ಲಿ ರಸ್ತೆ ಅಪಘಾತದಲ್ಲಿ ಸಾಯುವಂತೆ ಮತ್ತೊಂದು ʼಬ್ಲಾಕ್ ಮ್ಯಾಜಿಕ್ʼ ಮಾಡುವುದಾಗಿ ಬಾಬಾ ಹೆದರಿಸಿದ್ದಾನೆ.