ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಶ್ವದ ಅತಿದೊಡ್ಡ ಆಧ್ಯಾತ್ಮ ಹಬ್ಬ ಮಹಾ ಕುಂಭಮೇಳ ನಡೆಯುತ್ತಿದ್ದು, ದೇಶ ವಿದೇಶಗಳಿಂದಲೂ ಜನರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಮಹಾ ಕುಂಭಮೇಳಕ್ಕೆ ನಾನೂ ಹೋಗಬೇಕು ಎಂದುಕೊಂಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಈ ಬಾರಿ ಕುಟುಂಬ ಸಮೇತರಾಗಿ ಕುಂಭಮೇಳಕ್ಕೆ ಹೋಗಬೇಕು ಎಂದು ಕೊಂಡಿದ್ದೇನೆ. ಅಲ್ಲಿನ ಸರ್ಕಾರದವರು ಆಹ್ವಾನ ನೀಡಿದ್ದಾರೆ. ಇನ್ನೂ ಹೋಗುವ ದಿನಾಂಕ ನಿಗದಿಯಾಗಿಲ್ಲ ಎಂದರು.
ದೇವರ ಮೇಲೆ ಒಬ್ಬೊಬ್ಬರ ನಂಬಿಕೆ. ಪರಮೇಶ್ವರ ಅವತಾರ ಕಪಿಲೇಶ್ವೇರ. ಇಲ್ಲಿಗೆ ಮಹಾತ್ಮ ಗಾಂಧಿ ಅವರು, ಬಾಲ ಗಂಗಾಧರ ತಿಲಕ್ ಅವರು, ಸ್ವಾಮಿ ವಿವೇಕಾನಂದರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಉಳಿಯಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ರುದ್ರೇಶ್ವರನ ಪೂಜೆ ಮಾಡಿದ್ದೇವೆ. ಈ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇವೆ. ಕಾರ್ಯಕ್ರಮ ಯಶಸ್ವಿಯಾಗಲಿ, ರಾಜ್ಯಕ್ಕೂ, ನಮಗೂ, ನಿಮಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು.