2025ನೇ ಸಾಲಿನ ಮಹಾಕುಂಭ ಮೇಳಕ್ಕೆ ಸಾಕ್ಷಿಯಾಗಬಯಸುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ದೇಶದ ವಿವಿಧ ಭಾಗಗಳಿಂದ 1200 ವಿಶೇಷ ರೈಲುಗಳು ನಿಯೋಜನೆ ಮಾಡಲಾಗಿದ್ದು ಇದರಿಂದ ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸರಿ ಸುಮಾರಿ 40 ಕೋಟಿ ಭಕ್ತರು ಪ್ರಯಾಗ್ರಾಜ್ಗೆ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ. 2019ರಲ್ಲಿ ನಡೆದ ಕುಂಭ ಮೇಳದಲ್ಲಿ 24 ಕೋಟಿಗೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ 19 ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ಬರೋಬ್ಬರಿ 837 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ. 19 ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳಲ್ಲಿ ನಾಲ್ಕರ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈ ತಿಂಗಳಲ್ಲೇ ಇದು ಕಾರ್ಯಾರಂಭ ಕೂಡ ಮಾಡಲಿದೆ. ಇನ್ನುಳಿದಂತೆ ಏಳರಲ್ಲಿ ಕಾಮಗಾರಿ ನಡೆಯುತ್ತಿದ್ದು, ಎಂಟರ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ ಎಂದು ಪ್ರಯಾಗ್ರಾಜ್ನ ಡಿವಿಜನಲ್ ರೈಲ್ವೆ ಮ್ಯಾನೇಜರ್ ಹಿಮಾಂಶು ಬಡೋನಿ ಮಾಹಿತಿ ನೀಡಿದ್ದಾರೆ.
2019ರ ಕುಂಭ ಮೇಳದ ಸಂದರ್ಭದಲ್ಲಿ 8 ಕೋಚ್ಗಳನ್ನು ಹೊಂದಿದ್ದ 800 ರೈಲುಗಳು ಕಾರ್ಯನಿರ್ವಹಿಸಿದ್ದವು ಎಂದು ಬಡೋನಿ ಮಾಹಿತಿ ನೀಡಿದ್ದಾರೆ. ಈ ಬಾರಿಯ ರೈಲುಗಳು 16 ಕೋಚ್ಗಳನ್ನು ಹೊಂದಿದೆ. ಅಲ್ಲದೇ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ರೈಲು ಸೇವೆ ನೀಡುತ್ತೇವೆ ಎಂದಿದ್ದಾರೆ.
ಈ ರೈಲುಗಳು ನಗರದ ಪ್ರಯಾಗ್ರಾಜ್ ಜಂಕ್ಷನ್, ಸುಬೇದರ್ಗಂಜ್, ನೈನಿ, ಚಿಯೋಕಿ, ಪ್ರಯಾಗ್ರಾಜ್ ರಾಮ್ಬಾಗ್, ಜುನ್ಸಿ. ಪ್ರಯಾಗ್ರಾಜ್ ಸಂಗಂ, ಪ್ರಯಾಗ್ ಮತ್ತು ಫಾಫಮೌ ನಿಲ್ದಾಣಗಳಿಂದ ಕಾರ್ಯನಿರ್ವಹಿಸಲಿದೆ. ಅಕ್ಟೋಬರ್ 2024 ರೊಳಗೆ ಎಲ್ಲಾ ರೈಲ್ವೆ ಸಂಬಂಧಿತ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಬಡೋನಿ ಹೇಳಿದರು.
ರೈಲ್ವೇ ಸೌಲಭ್ಯಗಳನ್ನು ಹೆಚ್ಚಿಸುವ ರೈಲುಗಳ ಮೂಲಕ ಆರು ಪ್ರಮುಖ ದಿನಗಳಲ್ಲಿ 15 ಕೋಟಿಗೂ ಹೆಚ್ಚು ಜನರು ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿ ಹೇಳಿದರು.