ಮಾಜಿ ಮಹಿಳಾ ಸಹಪಾಠಿಯ ಫೋಟೋಗಳು ಮತ್ತು ವಿಡಿಯೋಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಮಧುರೈನ 28 ವರ್ಷದ ವೈದ್ಯ ಆರ್ ಸತೀಶ್ ಕುಮಾರ್ ನನ್ನು ಬಂಧಿಸಲಾಗಿದೆ.
ವೈದ್ಯ ಮತ್ತು ಯುವತಿ ಕೂಡ್ಲೂರು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಅಲ್ಲಿ ಇಬ್ಬರ ನಡುವೆ ಸ್ನೇಹ ಉಂಟಾಗಿ , ಸತೀಶ್ ಕುಮಾರ್ ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಈ ಸಮಯದಲ್ಲಿ ಆತ ಆಕೆಯ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ರೆಕಾರ್ಡ್ ಮಾಡಿದ್ದ.
ಏಳು ತಿಂಗಳ ಹಿಂದೆ ಸತೀಶ್ ಆಕೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಮಾರ್ಫ್ ಮಾಡಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದ. ಇದನ್ನು ಕಂಡುಹಿಡಿದ ನಂತರ ಯುವತಿ ಫೋಟೋ, ವಿಡಿಯೋಗಳನ್ನು ತೆಗೆದುಹಾಕುವಂತೆ ಕೇಳಿಕೊಂಡಿದ್ದಳು. ಆದರೆ ಆತ ಮನವಿ ನಿರಾಕರಿಸಿ ಬದಲಾಗಿ ಅವಳ ಮುಖದ ಮೇಲೆ ಆಸಿಡ್ ಎರಚುವ ಮೂಲಕ ಅವಳಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದನು. ಇದರಿಂದ ನೊಂದ ಆಕೆ ಚಿದಂಬರಂ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಳು.
ದೂರಿನ ಮೇರೆಗೆ ಸತೀಶ್ ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (3) ರ ಅಡಿಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 (ಇ) ಮತ್ತು 67 (ಎ) ಜೊತೆಗೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇದೇ ರೀತಿಯ ಘಟನೆಯಲ್ಲಿ ವಸಂತ್ ಕುಂಜ್‌ನ ಖಾಸಗಿ ಶಾಲೆಯ 15 ವರ್ಷದ 9 ನೇ ತರಗತಿ ವಿದ್ಯಾರ್ಥಿಯನ್ನು 13 ಸಹ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಅವುಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಕ್ಕೆ ಬಂಧಿಸಲಾಯಿತು.