
ಮಧುರೈ: ಹೆಚ್ಐವಿ ಪಾಸಿಟಿವ್ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದ ಕುಟುಂಬದವರ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ.
ವರಿಚೂರು ಭಾರತೀಯಾರ್ ಕಾಲೋನಿಯ ಎಂ. ಸುಂದರರಾಜ(52), ಅವರ ಪತ್ನಿ ಬೂಮಾದೇವಿ(45) ಮಕ್ಕಳಾದ ಎಸ್. ಸಂತಾನಮ್(29) ಮತ್ತು ಎಸ್. ನಂತಿನಿ(26) ಅವರ ವಿರುದ್ಧ ದೂರು ನೀಡಲಾಗಿದೆ. 2016 ರ ಸೆಪ್ಟೆಂಬರ್ನಲ್ಲಿ ಸುಂದರರಾಜ್ ಅವರ ಮಗ ಲಕ್ಷ್ಮಿಪತಿರಾಜನ್ ಜೊತೆಗೆ ಸಂತ್ರಸ್ತೆಯ ಮದುವೆ ನೆರವೇರಿತ್ತು. ಮದುವೆಯ ನಂತರದಲ್ಲಿ ಲಕ್ಷ್ಮಿಪತಿ ರಾಜನ್ ಹೆಚ್ಐವಿ ಪಾಸಿಟಿವ್ ಹೊಂದಿರುವುದು ಗೊತ್ತಾಗಿತ್ತು.
ಈ ಬಗ್ಗೆ ಪ್ರಶ್ನಿಸಿದಾಗ ಸುಂದರರಾಜ್ ಮತ್ತು ಬೂಮಾದೇವಿ ದಂಪತಿ ತಮ್ಮ ಮಕ್ಕಳೊಂದಿಗೆ ಸಂತ್ರಸ್ತೆಗೂ ಆಸ್ತಿ ಪಾಲು ನೀಡುವುದಾಗಿ ಭರವಸೆ ನೀಡಿದ್ದಾರೆ. 2017 ರಲ್ಲಿ ಮಹಿಳೆ ಗರ್ಭಿಣಿಯಾಗಿ ತವರು ಮನೆಗೆ ಹೋದಾಗ ಲಕ್ಷ್ಮೀಪತಿ ರಾಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಗಂಡನ ಸಾವಿನ ಸುದ್ದಿಯನ್ನು ಕುಟುಂಬ ಸದಸ್ಯರು ಅನೇಕ ದಿನಗಳವರೆಗೆ ಮುಚ್ಚಿಟ್ಟಿದ್ದರು. ಈಗ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸುತ್ತಿದ್ದಾರೆ ಎಂದು ಮಹಿಳೆ ಮಧುರೈನ ಹೆಚ್ಚುವರಿ ಮಹಿಳಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆ ಮತ್ತು ಆಕೆಯ ಮಗುವಿಗೆ ಹೆಚ್ಐವಿ ನೆಗೆಟಿವ್ ಬಂದಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.