ಚೆನ್ನೈ: ಬಸ್ ಚಾಲಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪುವ ಕೆಲವೇ ಕ್ಷಣಗಳ ಮೊದಲು ಸಮಯೋಚಿತ ಜಾಗರೂಕತೆಯಿಂದ, ವಾಹನವನ್ನು ಪಕ್ಕದಲ್ಲಿ ನಿಲ್ಲಿಸಿ ಕನಿಷ್ಠ 30 ಪ್ರಯಾಣಿಕರ ಪ್ರಾಣವನ್ನು ಉಳಿಸಿದ್ದಾನೆ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
44 ವರ್ಷದ ಚಾಲಕ ಅರುಮುಗಂ ಮೃತ ದುರ್ದೈವಿ. ಗುರುವಾರ ಬೆಳಗ್ಗೆ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (ಟಿಎನ್‌ಎಸ್‌ಟಿಸಿ) ಬಸ್‌ನಲ್ಲಿ 30 ಪ್ರಯಾಣಿಕರೊಂದಿಗೆ ಅರಪ್ಪಳಯಂ ಮಾರ್ಗವಾಗಿ ಕೊಡೈಕೆನಾಲ್‌ಗೆ ತೆರಳುತ್ತಿದ್ದಾಗ ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಬಸ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದರು.
ವರದಿಗಳ ಪ್ರಕಾರ, ಬೆಳಗ್ಗೆ 6.20ಕ್ಕೆ ಬಸ್ ಅರಪ್ಪಾಲಯದಿಂದ ಹೊರಟಿದೆ. ಸ್ವಲ್ಪ ಸಮಯದ ನಂತರ ಅರುಮುಗಂ ಅವರು ಬಸ್‌ನ ಕಂಡಕ್ಟರ್ ಭಾಗ್ಯರಾಜ್ ಬಳಿ ಎದೆನೋಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಬಳಿಕ ಕಷ್ಟಪಟ್ಟು ವಾಹನವನ್ನು ರಸ್ತೆಬದಿ ನಿಲ್ಲಿಸಿ ಕುಸಿದು ಬಿದ್ದಿದ್ದಾರೆ. ಕಂಡಕ್ಟರ್ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಬರುವಷ್ಟರಲ್ಲಿ ಅರುಮುಗಂ ಸಾವನ್ನಪ್ಪಿದ್ದರು.
ಅರುಮುಗಂ ಅವರು ಟಿಎನ್‌ಎಸ್‌ಟಿಸಿಯಲ್ಲಿ 12 ವರ್ಷಗಳಿಂದ ಚಾಲಕರಾಗಿರುವ ಅನುಭವ ಹೊಂದಿದ್ದಾರೆ. ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿ 30 ಜನರ ಪ್ರಾಣ ಉಳಿಸಿದ ಅವರ ಅನುಕರಣೀಯ ಕ್ರಮ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಮಧುರೈನ ಟಿಎನ್‌ಎಸ್‌ಟಿಸಿ ಡೆಪ್ಯುಟಿ ಕಮರ್ಷಿಯಲ್ ಮ್ಯಾನೇಜರ್ ಯುವರಾಜ್ ಹೇಳಿದ್ದಾರೆ. ಮೃತರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತ ಚಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಗೆ (ಜಿಆರ್‌ಹೆಚ್) ರವಾನಿಸಲಾಗಿದ್ದು, ಕರಿಮೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.