ಮಡಿಕೇರಿ: ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮತ್ತೆ ಗುಡ್ಡ ಕುಸಿತ ಆತಂಕ ಶುರುವಾಗಿದೆ. ಕಳೆದ ವಾರದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಸ್ವರ್ಗವೇ ಧರೆಗಿಳಿದಂತಿದ್ದು, ಕೊಡಗು ಜಿಲ್ಲೆ ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ನದಿಗಳು ಮೈದುಂಬಿ ಹರಿಯುತ್ತಿದ್ದು, ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.
ಆದರೆ, ಇದೇ ವೇಳೆ ಗುಡ್ಡ ಕುಸಿತದ ಆತಂಕವೂ ಶುರುವಾಗಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ಗುಡ್ಡ ಕುಸಿತ ಆತಂಕ ಉಂಟಾಗಿದೆ. 7 ಕುಟುಂಬಗಳ ಸ್ಥಳಾಂತರಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗಿದೆ.
2018 ರಲ್ಲಿ ಮಾದಾಪುರ -ಮಡಿಕೇರಿ ಮಧ್ಯೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಹೆಚ್ಚಿನ ಸಾವು ನೋವು ಸಂಭವಿಸಿತ್ತು. ಮಕ್ಕಂದೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡ್ಡ ಕುಸಿಯುವ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗುಡ್ಡದ ಕೆಳಗಿನ ಭಾಗದಲ್ಲಿ ಮನೆ ಇರುವ ಕುಟುಂಬಗಳಿಗೆ ಸ್ಥಳಾಂತರಕ್ಕೆ ನೋಟಿಸ್ ನೀಡಲಾಗಿದೆ. ನಿವಾಸಿಗಳು ಕೂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.