ಸಹೋದರ – ಸಹೋದರಿಯರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ರಕ್ಷಾ ಬಂಧನದ ದಿನವೇ, ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಕಳೆದುಕೊಂಡಿದ್ದಾನೆ. ಸಹೋದರನಿಗೆ ರಾಖಿ ಕಟ್ಟಲು ತೆರಳಿದ್ದ ಮಹಿಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ. ವೇಗವಾಗಿ ಬಂದ ಬಸ್, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ.
ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು 25 ವರ್ಷದ ಬಸಂತಿ ಬಾಯಿ ಮತ್ತು ಆಕೆಯ ಪತಿ ಸರ್ಮಾನ್ ಪಟೇಲ್ ಎಂದು ಗುರುತಿಸಲಾಗಿದೆ. ಬಸಂತಿ ಬಾಯಿ ಜೊತೆ ಆಕೆಯ ಇಬ್ಬರು ಮಕ್ಕಳು ಕೂಡ ಬೈಕ್ ನಲ್ಲಿ ಇದ್ದರು. ಮೂರು ವರ್ಷದ ರೇಖಾ ಮತ್ತು ಒಂದು ವರ್ಷದ ಯಶ್ ಬದುಕುಳಿದಿದ್ದು, ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸಂತಿ ಬಾಯಿ, ಅವರ ಪತಿ ಸರ್ಮನ್ ಮತ್ತು ಇಬ್ಬರು ಮಕ್ಕಳ ಜೊತೆ ರಕ್ಷಾಬಂಧನ ಹಬ್ಬವನ್ನು ಆಚರಿಸಲು ಛತ್ತರ್‌ಪುರ ಜಿಲ್ಲೆಯ ಬಿಜಾವರ್ ಪ್ರದೇಶದಿಂದ ತಾತವಾರ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಸಾಗರದ ಜಿಲ್ಲಾ ಕೇಂದ್ರದಿಂದ 60 ಕಿಲೋಮೀಟರ್ ದೂರದಲ್ಲಿರುವ ಬಂಡಾ ರಸ್ತೆಯ ಕ್ವಾಯ್ಲಾ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ.