ರಸ್ತೆಯಲ್ಲಿ ಅನಾರೋಗ್ಯದಿಂದ ಮಲಗಿದ್ದ 80 ವರ್ಷದ ಮಹಿಳೆಗೆ ಸಹಾಯ ಹಸ್ತ ಚಾಚಿದ ಮಹಿಳಾ ಪೊಲೀಸ್ ನಡೆ ನೆಟ್ಟಿಗರ ಹೃದಯ ಗೆದ್ದಿದೆ.
ತಮ್ಮ ಕಾರ್ಯಕ್ಕಾಗಿ ಮಧ್ಯಪ್ರದೇಶದ ದಾಮೋಹ್ನ ಮಹಿಳಾ ಪೊಲೀಸ್ ನೆಟ್ಟಿಗರಿಂದ ಪ್ರಶಂಸೆಗಳನ್ನು ಗಳಿಸುತ್ತಿದ್ದಾರೆ.
ವೃದ್ಧೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಚಿಕಿತ್ಸೆ ಕೊಡಿಸಿ, ಬಟ್ಟೆ, ಹಣ್ಣುಗಳನ್ನು ಖರೀದಿಸಿ ಮನೆಗೆ ಬಿಟ್ಟ ಮಹಿಳಾ ಪೊಲೀಸ್ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ.
ದಾಮೋಹ್ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ಟ್ವಿಟ್ಟರ್ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಬ್ ಇನ್ಸ್ಪೆಕ್ಟರ್ ಸುರುಭಿ ಎಂದು ಗುರುತಿಸಲಾದ ಮಹಿಳಾ ಪೋಲೀಸ್ ಅನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹೊಗಳಿದ್ದಾರೆ.
ತೆಂಡುಖೇಡ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ಸುರುಭಿ ಅವರು ನೋಡಿದಾಗ 80 ವರ್ಷದ ಮಹಿಳೆ ಬೀದಿಯಲ್ಲಿ ಮಲಗಿದ್ದರು. ಮಹಿಳೆ ತೀವ್ರ ಅಸ್ವಸ್ಥಗೊಂಡಿರುವುದನ್ನು ಕಂಡ ಸುರುಭಿ ತೆಂಡುಖೇಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ವೃದ್ಧೆ ಹರಿದ ಬಟ್ಟೆ ತೊಟ್ಟಿದ್ದರಿಂದ ಸುರುಭಿ ಹೊಸ ಬಟ್ಟೆ ತಂದು ಕೊಟ್ಟಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಇಷ್ಟಕ್ಕೇ ಸುಮ್ಮನಾಗದೇ ಆಕೆಗೆ ಹಣ್ಣುಗಳನ್ನು ತಂದುಕೊಟ್ಟು ನಂತರ ಅವರನ್ನು ಮನೆಗೆ ತಲುಪಿಸಿದ್ದಾರೆ. ವೃದ್ಧ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಬ್ ಇನ್ಸ್ ಪೆಕ್ಟರ್ ಸುರುಭಿ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆಗಳನ್ನು ಗಳಿಸುತ್ತಿದೆ.